

ಆಳಂದ ರಸ್ತೆಯಲ್ಲಿ ಸಬ್ ಅರ್ಬನ್ ಪೊಲೀಸರ ದಾಳಿ : ಮಹಾರಾಷ್ಟ್ರ ಕ್ಕೆ ಸಾಗಿಸುತ್ತಿದ್ಸವರು ಅಂದರ್
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಮಹಾರಾಷ್ಟçಕ್ಕೆ ಸಾಗಿಸುತ್ತಿದ್ದ ೪೧೧ ಚೀಲ ಅಕ್ಕಿಯನ್ನು ಲಾರಿ ಸಮೇತ ನಗರದ ಸಬ್‌ಅರ್ಬನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಾಲಕ ಸೈಪಾಲಿಕ ಮುಲ್ಲಾ ಹಾಗೂ ಸಾಗಣೆ ಮಾಡುತ್ತಿದ್ದ ಶಿವಕುಮಾರ ರಾರೋಡ ಎಂಬುವರನ್ನು ಬಂಧಿಸಲಾಗಿದೆ. ರಾಜು ರಾಠೋಡ ಎಂಬುವರು ಹೇಳಿದಂತೆ ಉಮರ್ಗಾದಲ್ಲಿ ಇಳಿಸಲು ಲಾರಿಯಲ್ಲಿ ಅಕ್ಕಿ ಸಾಗಿಸಲಾಗುತ್ತಿತ್ತು.
ಸರ್ಕಾರ ವಿವಿಧ ಯೋಜನೆಯಡಿ ಚೀಟಿದಾರರಿಗೆ ಹಂಚಿಕೆ ಮಾಡಲು ಬಿಡುಗಡೆಯಾಗಿರುವ ಅಕ್ಕಿಯನ್ನು ಶಿವಾಜಿನಗರದಲ್ಲಿ ದಾಸ್ತಾನು ಮಳಿಗೆಯಲ್ಲಿ ಸಂಗ್ರಹಿಸಿ, ಅಲ್ಲಿಂದ ಅಕ್ರಮವಾಗಿ ಮಹಾರಾಷ್ಟç ಸಾಗಿಸಲಾಗುತ್ತಿದೆ ಎಂಬ ಮಾಹಿತಿಯಂತೆ ಪೊಲೀಸ್ ಆಯುಕ್ತ ಆರ್.ಚೇತನ, ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಎಸಿಪಿ ರಾಜಣ್ಣ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ, ಸಿಬ್ಬಂದಿ ಹುಸೇನ್‌ಬಾಷಾ, ಮಲ್ಲಿಕಾರ್ಜುನ ಗಂಧಗೆ,ಹಾಜಿ ಮಲಂಗ, ಪ್ರಕಾಶ ಇತರರು ಕೂಡಿಕೊಂಡು ಆಳಂದ ರಸ್ತೆಯಲ್ಲಿನ ಧಾಬಾವೊಂದರ ಬಳಿ ದಾಳಿ ನಡೆಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಬಿ.ಪಾಟೀಲ್ ಅವರು ದೂರು ನೀಡಿದ್ದಾರೆ. ಸಬ್‌ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.