ಕಳಚೆ ಸಂತ್ರಸ್ತರಿಗೆ ಪರಿಹಾರ ಒದಗಿಸಿ

Kalache News
Published on

ಕಾರವಾರ: ಕಳಚೆ ಗ್ರಾಮದಲ್ಲಿ ನೆರೆ, ಭೂ ಕುಸಿತದಿಂದ ಉಂಟಾಗಿರುವ ಹಾನಿಯ ನಿಖರ ಸರ್ವೇ ನಡೆಸಿ ಮನೆ, ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಸೋಮವಾರ ಮನವಿ ಮಾಡಿದರು.
ಗ್ರಾಮದಲ್ಲಿ ಸುಮಾರು 2021 ರ ಜುಲೈ ತಿಂಗಳ 21 ಹಾಗೂ 22 ರಂದು ಸುರಿದ ಭಾರಿ ಮಳೆಯಿಂದ ಭಾರೀ ಭೂ ಕುಸಿತವಾಗಿತ್ತು. ಒಂದು ಮನೆ ಸಂಪೂರ್ಣವಾಗಿ ಬಿದ್ದು ಒಬ್ಬ ಮಹಿಳೆ ಮೃತಪಟ್ಟಿದ್ದರು. ಇನ್ನೂ ಹಲವು ಮನೆಗಳಿಗೆ ಹಾನಿಯಾಗಿದ್ದು, ಸಾಕಷ್ಟು ಅಡಕೆ ತೋಟ ಮುಚ್ಚಿ ಹೋಗಿತ್ತು. ಇಡೀ ಕಳಚೆ ಗ್ರಾಮ ಸಂಪರ್ಕ ಕಳೆದುಕೊಂಡಿತ್ತು.
ಆ ಸಂದರ್ಭದಲ್ಲಿ ಸಿಎಂಬ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಹಾನಿಯ ಸರ್ವೇ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದರು. ಅಲ್ಲದೇ ಮನೆ ಕಳೆದುಕೊಂಡವರಿಗೆ ಪರ್ಯಾಯ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು.
ರಸ್ತೆ ರಿಪೇರಿ ಮಾಡಿ ಸಂಪರ್ಕ ಮರು ಸ್ಥಾಪಿಸಲಾಗಿದೆ. ಆದರೆ, ಇದುವರೆಗೂ ಮನೆ ಕಳೆದುಕೊಂಡವರಿಗೆ ಪರ್ಯಾಯ ನಿವೇಶನ ಸಿಕ್ಕಿಲ್ಲ. ಬೆಳೆ, ಮನೆ ಹಾನಿಗಳ ಸರ್ವೇ ಕಾರ್ಯ ನಡೆದಿಲ್ಲ. ಭೂ ಕುಸಿತ ವಲಯ ಎಂದು ಬೋರ್ಡ್ ಹಾಕಲಾಗಿದ್ದು ಬಿಟ್ಟರೆ ಬೇರೇನೂ ಕಾರ್ಯವಾಗಿಲ್ಲ. ಹಾಗಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಗ್ರಾಮಸ್ಥರು ತಮ್ಮ ಮಕ್ಕಳನ್ನು ಗ್ರಾಮದ ಶಾಲೆಗಳಿಗೆ ಕಳಿಸಲು ಹೆದರಿದರು. ಶೂನ್ಯ ದಾಖಲಾತಿಯಿಂದ ಸರ್ಕಾರಿ ಹೈಸ್ಕೂಲ್ ಮುಚ್ಚಿದೆ. ಸೊಸೈಟಿ, ಅಂಚೆ ಕಚೇರಿ, ಆಸ್ಪತ್ರೆಗಳು ಬಾಗಿಲು ತೆರೆದು ಕಾರ್ಯನಿರ್ವಹಿಸುತ್ತಿವೆ.
ಹಾಗಾಗಿ ಹಾನಿಯಾದ ಮನೆ, ಜಮೀನುಗಳ ಸರ್ವೇ ಕಾರ್ಯ ನಡೆಸಬೇಕು. ಮನೆ ಕಳೆದುಕೊಂಡವರಿಗೆ ಪರ್ಯಾಯ ನಿವೇಶನ ನೀಡಬೇಕು. ಇಡೀ ಗ್ರಾಮವನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಹಾಗೆ ಸ್ಥಳಾಂತರಿಸುವುದಾದಲ್ಲಿ ಸರ್ಕಾರಿ ಯೋಜನೆಗಳಿಗೆ ಭೂ ಸ್ವಾಧೀನ ಮಾಡುವ ರೀತಿಯಲ್ಲಿ ನಮಗೂ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಗಜಾನನ ಗ ಭಟ್ಟ, ಗಣಪತಿ ಶಂಕರ ಭಟ್ಟ, ರಾಮಕೃಷ್ಣ ಹೆಗಡೆ, ಶ್ರಿಪಾದ ವೆಂಕಟರಮಣ ಹೆಗಡೆ, ಭಾಸ್ಕರ ದೇವಪ್ಪ ಹೆಗಡೆ, ಗಜಾನನ ತಮ್ಮು ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net