ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹಲವು ವರ್ಷದಿಂದ ಅಧಿಕಾರದಲ್ಲಿ ಇದ್ದು, 12 ಲಕ್ಷ ಇದ್ದ ಜನಸಂಖ್ಯೆ ಇದೀಗ 18ಲಕ್ಷಕ್ಕೆ ಹೆಚ್ಚಾಗಿದೆ. ಆದರೆ ನಗರದ ಅಭಿವೃದ್ಧಿ ವಿಷಯದಲ್ಲಿ ಶೂನ್ಯ ಸಾಧನೆಯನ್ನು ಕಾಂಗ್ರೆಸ್ ಮುಂದುವರಿಸಿದೆ. ಯಾವುದೇ ಸಮಸ್ಯೆಗಳನ್ನು ನೀಗಿಸಲು ವಿಲವಾಗಿದ್ದು, ಜನರ ಎಲ್ಲ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಕೃಷ್ಣಾ ನಾಯಕ್ ಹೇಳಿದರು.
ನಗರದ ಮಹಾನಗರ ಪಾಲಿಕೆಯಲ್ಲಿ ಶನಿವಾರ ಪ್ರತಿಪಕ್ಷದ ನಾಯಕನಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿ, ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಸಮಸ್ಯೆಗಳು ನಿರಂತರವಾಗಿವೆ. ಚರಂಡಿ, ರಸ್ತೆ, ಸಾಮೂಹಿಕ ಶೌಚಗೃಹ, ಕುಡಿಯುವ ನೀರು ಸೇರಿ ಯಾವುದೇ ಸಮಸ್ಯೆಗಳೂ ಬಗೆಹರಿಯುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಕೃಷ್ಣಾ ನಾಯಕ್ ಕುಟುಂಬವೂ ಜನಸಂದಿಂದಲೂ ಪರಿವಾರದ ಜತೆಯಲ್ಲಿ ಇದೆ. ಕೃಷ್ಣಾ ನಾಯಕ ಅಪ್ರತಿಮ ಸಂಟಕ, ಪಕ್ಷ, ಜನಹಿತ, ಹಿಂದುತ್ವದ ಹೋರಾಟಕ್ಕೆ ಸದಾ ಮುಂದೆ ಇರುವ ವ್ಯಕ್ತಿ. ಕಾಂಗ್ರೆಸ್ನ ದುರಾಡಳಿತಕ್ಕೆ ತಕ್ಕ ಉತ್ತರ ನೀಡಲು ಶಕ್ತನಿದ್ದು, 55 ವಾರ್ಡ್ಗಳ ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಪದಗ್ರಹಣಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣನವರ ಮೂರ್ತಿಗೆ ಪುಷ್ಪನಮನ ಸಲ್ಲಿಸಿ, ಮೆರವಣಿಗೆ ಮೂಲಕ ಪಾಲಿಕೆಗೆ ಆಗಮಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ, ಡಾ.ಬಿ.ಜಿ ಪಾಟೀಲ್, ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಂಸದ ಡಾ.ಉಮೇಶ ಜಾಧವ್, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ವಿಶಾಲ ದರ್ಗಿ, ಉಮೇಶ ಪಾಟೀಲ್, ಶಿವಾನಂದ ಪಿಸ್ತಿ, ವರದಾಶಂಕರ ಶೆಟ್ಟಿ, ರಾಜು ವಾಡೇಕರ್ ಇತರರಿದ್ದರು.
ದಲಿತರ ಗೋಳು ಕೇಳಿ: ಇತ್ತೀಚೆಗೆ ಚಿಕನ್ ತ್ಯಾಜ್ಯ ಸಾಗಿಸುವ ಗುತ್ತಿಗೆದಾರನು ಪಾಲಿಕೆ ಎದುರು ಪ್ರತಿಭಟನೆ ಆರಂಭಿಸಿದರೆ ಮೇಯರ್, ಶಾಸಕರು ತಕ್ಷಣ ಸ್ಪಂದಿಸಿದರು. ಆದರೆ ನೂರಾರು ದಿನದಿಂದ ದಲಿತ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರೂ ಕೇಳುವವರೇ ಇಲ್ಲ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ ಮಾಡುವುದು ಸರಿಯಲ್ಲ. ಮೇಯರ್, ಶಾಸಕರು ದಲಿತರ ಮತಗಳಿಂದ ಗೆದ್ದು ಬಂದಿದ್ದಾರೆ ಎಂಬುದು ನೆನಪಿರಲಿ ಎಂದು ಚಂದು ಪಾಟೀಲ್ ಎಚ್ಚರಿಕೆ ನೀಡಿದರು.
ಚಂದು ಪಾಟೀಲ್, ದತ್ತಾತ್ರೇಯ ಪಾಟೀಲ್ ಸೇರಿ ಪಕ್ಷದ ಎಲ್ಲ ಮುಖಂಡರು, ಪ್ರತಿನಿಧಿಗಳು, ವಾರ್ಡ್ ಜನರ ಆಶೀರ್ವಾದದಿಂದ ಪ್ರತಿಪಕ್ಷ ನಾಯಕ ಸ್ಥಾನ ದೊರಕಿದೆ. ಎಲ್ಲರ ಮಾರ್ಗದರ್ಶನದಲ್ಲಿ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ನಿರಂತರವಾಗಿ ನಡೆಸಲಾಗುವುದು.
> ಕೃಷ್ಣಾ ನಾಯಕ,
ಪ್ರತಿಪಕ್ಷ ನಾಯಕ ಮಹಾನಗರ ಪಾಲಿಕೆ