

ಚಿತ್ತಾಪುರ: ಭಾರತ ಉತ್ತಮ ಸಂಸ್ಕಾರ, ಸಂಸ್ಕೃತಿ ಹೊಂದಿದ ದೇಶವಾಗಿದೆ. ಹಿಂದೂಗಳ ಹಾದಿತಪ್ಪಿಸುವ ಕೆಲಸ ಕೆಲವರು ಮಾಡುತ್ತಿದ್ದು, ಎಲ್ಲರೂ ಎಚ್ಚರ ವಹಿಸಬೇಕು. ಧರ್ಮ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕೊಂಚೂರು ಸವಿತಾ ಪೀಠದ ಶ್ರೀ ಸವಿತಾನಂದನಾಥ ಸ್ವಾಮೀಜಿ ಹೇಳಿದರು.
ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವಾದಿ ಶರಣರ ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಿಂದೂಗಳಲ್ಲಿ ಒಡೆದಾಳುವ ನೀತಿ ನಡೆಯುತ್ತಿದೆ. ಧರ್ಮ ಉಳಿಸುವ ಜತೆಗೆ ಸಮೃದ್ಧಿ ದೇಶವನ್ನು ಕಾಪಾಡಲು ಪ್ರತಿಯೊಬ್ಬರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕನ್ನೇರಿ ಮಠದ ಶ್ರೀ ಕುಮಾರ ಸ್ವಾಮೀಜಿ ಮಾತನಾಡಿ, ಸೈನಿಕರು ಗಡಿಯಲ್ಲಿ ನಿಂತು ದೇಶ ರಕ್ಷಣೆ ಮಾಡುತ್ತಿದ್ದರೆ, ಕೆಲವರು ಒಳಗಿದ್ದು ದೇಶ ಒಡೆಯುವ ಕಾರ್ಯ ನಡೆಸುತ್ತಿದ್ದಾರೆ. ಯುವಕರು ಜಾತಿ-ಮತ, ಮೇಲು- ಕೀಳು ಎಂಬ ಭಾವನೆ ಕಿತ್ತಾಹಾಕಬೇಕು. ಹಿಂದೂಗಳೆಲ್ಲರೂ ಒಂದೇ ಎಂಬುದನ್ನು ಮನದಲ್ಲಿಟ್ಟುಕೊಂಡು ಒಗ್ಗಟ್ಟು ಪ್ರದರ್ಶಿಸಬೇಕು. ಯುವ ನಾಯಕ ಚಂದು ಪಾಟೀಲ್ ನೇತೃತ್ವದಲ್ಲಿ ಸೆ.27ರಂದು ಕಲಬುರಗಿಯಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ನಡೆಯುತ್ತಿದ್ದು, ಪ್ರತಿಯೊಬ್ಬರೂ ಕುಟುಂಬ ಸಮೇತ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾವೇಶದ ಕಾರ್ಯಾಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಪಕ್ಷಭೇದ ಮರೆತು ಎಲ್ಲರೂ ಸಮಾವೇಶದಲ್ಲಿ ಭಾಗಿಯಾಗಬೇಕು. ಕೃಷಿ ಸಂಬಂಧಿತ ವಿವಿಧ ವಿಷಯಗಳ ಕುರಿತು ರೈತರಿಗೆ ಜ್ಞಾನ ನೀಡಲಾಗುವುದು. ಹಿಂದೂಗಳು ಒಗ್ಗಟ್ಟಾಗಿ ದೇಶ ಉಳಿಸಬೇಕು. ಕನ್ನೇರಿ ಮಠದ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಚಿತ್ತಾಪುರ-ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಲಬುರಗಿ ಮಾಜಿ ಮಹಾಪೌರ ವಿಶಾಲ ದರ್ಗಿ, ಪ್ರಮುಖರಾದ ಶಶಿಕಲಾ ತೆಂಗಳಿ, ಸೋಮಶೇಖರ ಪಾಟೀಲ್ ಬೆಳಗುಂಪಾ, ವಿಠ್ಠಲ ನಾಯಕ, ಮಲ್ಲಿಕಾರ್ಜುನ ಎಮ್ಮೆನೋರ, ಅಯ್ಯಪ್ಪ ರಾಮತೀರ್ಥ, ಚಂದ್ರಶೇಖರ ಅವಂಟಿ, ಆನಂದ ಪಾಟೀಲ್ ನರಬೋಳಿ, ಮಲ್ಲಿಕಾರ್ಜುನರೆಡ್ಠಿ ಇಜಾರ, ಕೋಟೇಶ್ವರ ರೇಷ್ಮಿ, ಬಸವರಾಜ ಹೂಗಾರ, ಪೋಮು ರಾಠೋಡ್, ತುಕಾರಾಮ ನಾಯಕ, ಮಲ್ಲಿಕಾರ್ಜುನ ಪೂಜಾರಿ, ಬಸವರಾಜ ಸಂಕನೂರ, ಬಸವರಾಜ ಕಾಳಗಿ, ಸಿದ್ರಾಮಪ್ಪ ರೇಷ್ಮಿ, ರಮೇಶ ಬೊಮ್ಮನಳ್ಳಿ, ಮಹೇಶ ಬಾಳಿ, ವೀರಣ್ಣ ಯಾರಿ, ದಶರಥ ದೊಡ್ಡಮನಿ, ಶ್ರೀಶೈಲ ಪಾಟೀಲ್, ಬಸಲಿಂಗಪ್ಪ ಸಜ್ಜನ್, ಸಂತೋಷ ಹಾವೇರಿ, ಈರಣ್ಣ ಮಲ್ಕಂಡಿ, ವಿಶ್ವನಾಥ ಅಫಜಲಪುರಕರ ಇತರರಿದ್ದರು.
ಸಮಾವೇಶದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಸಂತೋಷ ಅಲ್ಲೂರ ಸ್ವಾಗತಿಸಿದರು. ಅಂಬರೇಶ ಸುಲೇಗಾಂವ್ ನಿರೂಪಣೆ ಮಾಡಿದರು. ಪ್ರಸಾದ ಅವಂಟಿ ವಂದಿಸಿದರು.