ಕುಡಿಯುವ ನೀರಿಗೂ ಹಣ ಇಲ್ಲ: ಶಾಸಕ ಬಿ.ಆರ್​.ಪಾಟೀಲ್​ ಕಳವಳ

BR Patil
BR Patil
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಆರ್​.ಪಾಟೀಲ್​ ಕಳವಳ
ಕಲಬುರಗಿ: ತಾಲೂಕು ಮಟ್ಟದಲ್ಲಿ ಶಾಸಕರು ತ್ವರಿತ ಕಾರ್ಯಪಡೆ (ಟಾಸ್ಕ್​ೋರ್ಸ್​) ಸಭೆಗಳನ್ನು ನಡೆಸಿ, ಅವರವರ ತಾಲೂಕಿಗೆ ಬೇಕಾದಷ್ಟು ನೀಡಬೇಕಾದ ಅನುದಾನದ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದ್ದು, ಆಳಂದ ಕ್ಷೇತ್ರದಕ್ಕೆ ಕುಡಿಯುವ ನೀರಿಗೆ ಕಾರ್ಯಪಡೆಯಿಂದ 4.40 ಲಕ್ಷ ರೂ. ಕ್ರಿಯಾ ಯೋಜನೆ ಸಲ್ಲಿಸಿದ್ದು, ಕೇವಲ 45 ಲಕ್ಷ ರೂ. ಬಿಡುಗಡೆ ಮಾಡಿದ್ದು, ಯಾವುದಕ್ಕೂ ಸಾಲುತ್ತಿಲ್ಲ ಎಂದು ಶಾಸಕ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್​.ಪಾಟೀಲ್​ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಖಾತೆಯಲ್ಲಿ 175 ಕೋಟಿ ರೂ. ಲಭ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದ್ದಾರೆ. ಆದರೆ ಸರ್ಕಾರ ಬರ ಘೋಷಣೆ ಮಾಡಿದ ನಂತರವೇ ಈ ನಿಧಿಯನ್ನು ಬಳಸಲು ಸಾಧ್ಯವಿದೆ. ಪ್ರಸ್ತುತ ಆಳಂದ ಕ್ಷೇತ್ರದ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ನಿತ್ಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಣವೇ ಇಲ್ಲ. ಪ್ರತಿ ಪಂಚಾಯಿತಿಗಳಿಗೆ ಕುಡಿಯುವ ನೀರಿನ ನಿರ್ವಹಣೆಗೆ ಕನಿಷ್ಠ ಐದು ಲಕ್ಷ ರೂ. ನೀಡದಿದ್ದರೆ ಸಮಸ್ಯೆ ಗಂಭೀರವಾಗಲಿದೆ ಎಂದು ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಹೀಗೆ ಮುಂದುವರಿದರೆ ಪಂಚಾಯಿತಿ ಪಿಡಿಒಗಳು, ಶಾಸಕರು ಜನರಿಗೆ ಸಮರ್ಪಕ ಉತ್ತರ ನೀಡಲು ಅಸಾಧ್ಯವಾಗಲಿದೆ. ನೀರಿನ ಜತೆಗೆ ಜಾನುವಾರು ಮೇವು ಲಭ್ಯತೆ ಖಚಿತ ಪಡಿಸಿಕೊಂಡು, ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಕೇಂದ್ರ ಸರ್ಕಾರದ ವಿಬಿ ಜಿರಾಮ್​ ಜಿ ಪಾಲುದಾರಿಕೆಯಲ್ಲಿ ಶೇ.300ದಷ್ಟು ರಾಜ್ಯಸರ್ಕಾರ ಪಾಲು ಹೆಚ್ಚಿಸಿದ್ದು, ಸಂಪನ್ಮೂಲವನ್ನು ರಾಜ್ಯ ಸರ್ಕಾರ ಒದಗಿಸಬೇಕು. ನಿರುದ್ಯೋಗಿಗಳಿಗೆ ಕೆಲಸ ನೀಡಿ, ವಲಸೆ ತಡೆಯಬೇಕು ಎಂದು ಹೇಳಿದರು.
3 ಟಿಎಂಸಿ ನೀರು ಬಿಡಲಿ: ನಾರಾಯಣಪುರ ಅಣೆಕಟ್ಟೆಯಿಂದ ಈಗಾಗಲೇ ಒಂದು ಟಿಎಂಸಿ ನೀರು ಬಿಡುಗಡೆ ಮಾಡಿದ್ದು, ಭೀಮಾ ಅಚ್ಚುಕಟ್ಟು ಪ್ರದೇಶ, ಕಲಬುರಗಿ ಮಹಾನಗರಕ್ಕೆ ಒದಗಿಸುವ ನೀರು ಪೂರೈಸಲು ಇನ್ನೂ ಮೂರು ಟಿಎಂಸಿ ನೀರು ತುರ್ತಾಗಿ ನಾರಾಯಣಪುರದಿಂದ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ.
ಎಲ್​ನಿನೋ ಪರಿಣಾಮದಿಂದ ಭೀಕರ ಬರ ಆವರಿಸಿದ್ದು, ಕೇಂದ್ರ ಸಚಿವರ ಹೇಳಿಕೆಯಂತೆ 360ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಬರದ ಮುನ್ಸೂಚನೆ ನೀಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಮುಂದಾಲೋಚನೆಯಿಂದ ತ್ವರಿತ ಕ್ರಮ ಕೈಗೊಳ್ಳಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ವಾಡಿಕೆಯಂತೆ ಮಳೆ ಬಿದ್ದು, ಬಿತ್ತನೆ ಆರಂಭವಾಗಬೇಕಿತ್ತು. ಮಳೆ ಕೊರತೆಯಿಂದ ಬಿತ್ತನೆ ಆಗಿಲ್ಲ ಎಂದು ಹೇಳಿದ್ದಾರೆ.
ಬೆಳೆ ವಿಮೆ ಪರಿಹಾರ ಪಾವತಿಸಲಿ
ಬರದ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಬೆಳೆ ವಿಮೆ ಮಾಡಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಬೆಳೆ ವಿಮೆ ನಮ್ಮ ಜಿಲ್ಲೆಗೆ 780 ಕೋಟಿ ರೂ. ಮಂಜೂರಾಗಿದ್ದು, ಅದರ ಮಧ್ಯಂತರ ಪರಿಹಾರ 240 ಕೋಟಿ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ 340 ಕೋಟಿ ರೂ. ಬೆಳೆ ವಿಮೆ ತಕ್ಷಣ ರೈತರಿಗೆ ಪಾವತಿಸಬೇಕು ಎಂದು ಬಿ.ಆರ್​.ಪಾಟೀಲ್​ ಆಗ್ರಹಿಸಿದ್ದಾರೆ.
ಬರ ಪ್ರದೇಶವಾದ ಕಲಬುರಗಿ ಭಾಗದಲ್ಲಿ ಶಾಶ್ವತ ಪರಿಹಾರಕ್ಕೆ ಸರ್ಕಾರ ಪ್ರಯತ್ನಿಸಿಲ್ಲ. ಆದ್ದರಿಂದಲೇ ಅಂತರ್ಜಲ ಕುಸಿದು ಶೇ.50 ಮೇಲ್ಪಟ್ಟು ಕುಸಿದಿದೆ. ಬಾವಿ, ಬೋರ್​ವೆಲ್​, ಹಳ್ಳ, ಕೊಳ್ಳಗಳೆಲ್ಲ ಬತ್ತಿವೆ. ಆದ್ದರಿಂದ ಶಾಶ್ವತವಾಗಿ ಅಂತರ್ಜಲ ಹೆಚ್ಚಿಸಲು ಮಹಾರಾಷ್ಟ್ರ ಮಾದರಿಯನ್ನು ಅಳವಡಿಸಿಕೊಳ್ಳಬೇಕು.
> ಬಿ.ಆರ್​.ಪಾಟೀಲ್​, ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net