ಜೆಸ್ಕಾಂ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಕಲಬುರಗಿ ಡಿಸಿ ಕಚೇರಿಯಲ್ಲಿ ಗುರುವಾರ ನಡೆದ ಕೆಇಆರ್​ಸಿ ಸಭೆಯಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮತ್ತು ಅವರ ತಂಡ ವಿದ್ಯುತ್​ಗೆ ಸಂಬಂಧಿಸಿದ ಸಮಸ್ಯೆಗಳ ಪಟ್ಟಿಯನ್ನು ಆಯೋಗದ ಅಧ್ಯಕ್ಷ ಪಿ.ರವಿಕುಮಾರ್​ ಅವರಿಗೆ ಸಲ್ಲಿಸಿತು.
ಕಲಬುರಗಿ ಡಿಸಿ ಕಚೇರಿಯಲ್ಲಿ ಗುರುವಾರ ನಡೆದ ಕೆಇಆರ್​ಸಿ ಸಭೆಯಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮತ್ತು ಅವರ ತಂಡ ವಿದ್ಯುತ್​ಗೆ ಸಂಬಂಧಿಸಿದ ಸಮಸ್ಯೆಗಳ ಪಟ್ಟಿಯನ್ನು ಆಯೋಗದ ಅಧ್ಯಕ್ಷ ಪಿ.ರವಿಕುಮಾರ್​ ಅವರಿಗೆ ಸಲ್ಲಿಸಿತು.
Published on: 

ಕಲಬುರಗಿ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸಿದ್ಧಪಡಿಸಿದ ಕರ್ನಾಟಕ ವಿದ್ಯುಚ್ಛಕ್ತಿ ಸರಬರಾಜು ನಿಯಮಾವಳಿ (ಇಎಸ್​ಆರ್​)-2026 ಕರಡು ಪ್ರತಿ ಕುರಿತು ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗೆ ಸಂಬಂಧಿಸಿದ ಸಾರ್ವಜನಿಕ ವಿಚಾರಣಾ ಸಭೆಯಲ್ಲಿ ರೈತರು, ಗ್ರಾಹಕರು, ಕೈಗಾರಿಕೋದ್ಯಮಿಗಳು ಸಮಸ್ಯೆಗಳ ಸರಮಾಲೆಯೊಂದಿಗೆ ಜೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರು ತಮ್ಮ ಸಮಸ್ಯೆ ಹೇಳಿಕೊಂಡರು. ಸಂಘ-ಸಂಸ್ಥೆ ಪ್ರತಿನಿಧಿಗಳು ದೂರು ಕುರಿತು ಪತ್ರ ಸಲ್ಲಿಸಿದರು. ಇನ್ನೂ ಕೆಲವರು ಮೌಖಿಕವಾಗಿ ದೂರಿದರು. ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ನೇತೃತ್ವದಲ್ಲಿ ಬೇಡಿಕೆಗಳ ಪಟ್ಟಿ ಸಲ್ಲಿಸಲಾಯಿತು.

ಸಾಮಾಜಿಕ ಹೋರಾಟಗಾರ ದೀಪಕ್​ ಗಾಲಾ ಮಾತನಾಡಿ, ಇಎಸ್​ಆರ್​ನಲ್ಲಿ ಗ್ರಾಹಕ-ಉತ್ಪಾದಕ, ಅಭಿವೃದ್ಧಿದಾರ, ಕಂಟೋನ್ಮೆಂಟ್​ ಪ್ರಾಧಿಕಾರ, ಕೈಗಾರಿಕಾ ಎಸ್ಟೇಟ್​, ಕೈಗಾರಿಕಾ ಪಾರ್ಕ್​, ಟೌನ್​ಶಿಪ್​ ಪ್ರದೇಶ, ವಿದ್ಯುದ್ದೀಕರಣ ಪ್ರದೇಶ ಎಂಬ ಪದ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಳಗಿ ತಾಲೂಕು ಕುಳಗೇರಾ ರೈತ ಮಲ್ಲಿಕಾರ್ಜುನ ಪಾಟೀಲ್​ ಮಾತನಾಡಿ, ಒಂದು ತಿಂಗಳಲ್ಲಿ ಒಂದೇ ಟಿಸಿ ನಾಲ್ಕು ಸಲ ಬರ್ನ​ ಆಗಿದೆ. ಪ್ರತಿ ಬಾರಿ ಟಿಸಿ ಕೂಡಿಸಲು ಒಂದು ವಾರ ಹಿಡಿಯುತ್ತದೆ. ಕಳೆದ ಬಾರಿ ಟಿಸಿ ಕೂಡಿಸುವಾಗ ಸ್ಫೋಟಗೊಂಡಿದೆ. ಇದಕ್ಕೆ ಯಾರು ಹೊಣೆ? ಹೀಗೆ ನಡೆದರೆ ನಮ್ಮ ಪರಿಸ್ಥಿತಿ ಏನು? ಯಾರಿಗೆ ಹೇಳಬೇಕು? ಜೆಸ್ಕಾಂ ಅಧಿಕಾರಿಗಳು ಹಣ ಪಡೆದು ಟಿಸಿಗಳ ಸಾಮರ್ಥ್ಯ ಮೀರಿ ಹೆಚ್ಚುವರಿಯಾಗಿ ಸಂಪರ್ಕ ಕಲ್ಪಿಸುತ್ತಾರೆ. ಇದರಿಂದ ಟಿಸಿ ಸುಟ್ಟರೆ ಬದಲಿಸಲು ವಾರಗಟ್ಟಲೆ ಬೇಕಾಗುತ್ತದೆ. ಈಗ ಬರ ಇದೆ. ಬಿಸಿಲಿಗೆ ಬೆಳೆ ಒಣಗುತ್ತಿದೆ. ಈ ಸಂದರ್ಭದಲ್ಲಿ ಜೆಸ್ಕಾಂ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.

ಅಹವಾಲು ಆಲಿಸಿದ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್​ ಮಾತನಾಡಿ, ಇಎಸ್​ಆರ್​ ಕರಡು ಪ್ರತಿ ಇನ್ನೂ ಅಂತಿಮವಾಗಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾರ್ವಜನಿಕ ಅಹವಾಲು, ವಿಚಾರಣೆ ನಡೆಸಿ ಸಂಗ್ರಹಿಸುವ ಅಭಿಪ್ರಾಯ, ಸಲಹೆ ಮತ್ತು ಆೇಪಣೆಗಳನ್ನು ಕೂಲಂಕಷ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಆಯೋಗದ ಸದಸ್ಯ ಎಚ್​.ಕೆ. ಜಗದೀಶ, ಜಾವೇದ್​ ಅಖ್ತರ್​, ಸಹಾಯಕ ಕಾರ್ಯದರ್ಶಿ ಪಿ.ಆರ್​. ಗೋಪಿನಾಥ ಸೇರಿ ಇತರರಿದ್ದರು.

ರಾಜ್ಯವ್ಯಾಪಿ ಬರುವ ಎಲ್ಲ ಅಹವಾಲುಗಳ ಕೂಲಂಕಷ ಪರಿಶೀಲನೆ ನಡೆಸಿ ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಅಂತಿಮ ನಿಯಮಾವಳಿ ರೂಪಿಸಲಾಗುವುದು.
> ಪಿ.ರವಿಕುಮಾರ್​ ಕೆಇಆರ್​ಸಿ ಅಧ್ಯಕ್ಷ
ವಿದ್ಯುತ್​ ಬಳಕೆ ರಸೀದಿಯಲ್ಲಿ ಗ್ರಾಹಕ ಹೊಂದಿರುವ ಭದ್ರತಾ ಠೇವಣಿ, ಅದರ ಮೇಲಿನ ಬಡ್ಡಿ, ವಿದ್ಯುತ್​ ಮೀಟರ್​ ಸ್ಥಿತಿಗತಿ, ಯಾವ ಟಿಸಿಯಿಂದ ವಿದ್ಯುತ್​ ಪೂರೈಸಲಾಗುತ್ತಿದೆ, ಯಾವ ಫೀಡರ್​ ವ್ಯಾಪ್ತಿಗೆ ಟಿಸಿ ಒಳಪಟ್ಟಿದೆ ಎಂಬ ವಿಷಯ ಸೇರ್ಪಡೆ ಮಾಡಬೇಕು.
> ದೀಪಕ್​ ಗಾಲಾ ಸಾಮಾಜಿಕ ಹೋರಾಟಗಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net