ನರೇಂದ್ರ ಮೋದಿ ದೇಶಕ್ಕೆ ರಕ್ಷಾ ಕವಚ: ಸಿ ಟಿ ರವಿ ಬಣ್ಣನೆ

ct ravi
ct ravi
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್​ಸಿ ಸಿ.ಟಿ.ರವಿ ಹೇಳಿಕೆ >
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಆಡಳಿತಕ್ಕೆ ದೇಶದ ಜನರೆಲ್ಲರೂ ರಕ್ಷಾಕವಚವಾಗಿ ನಿಲ್ಲಬೇಕಿದೆ. ನಾವು ಮೋದಿಯವರಿಗೆ ರಕ್ಷಣೆಯಾದರೆ, ಇಡೀ ದೇಶಕ್ಕೆ ರಕ್ಷಾ ಕವಚವಾಗಲಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಮೋದಿ ಸರ್ಕಾರದ 12 ವರ್ಷ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಮೋದಿ ಸರ್ಕಾರದ ಸಾಧನೆ ಅರ್ಥವಾಗಬೇಕಾದರೆ ಹಿಂದಿನ ಯುಪಿಎ ಆಡಳಿತವನ್ನು ಅವಲೋಕಿಸಬೇಕು ಎಂದರು.
ಅಂದು 2ಜಿ, ಕೋಲ್​ಜಿ ಹಾಗೂ ಕಾಮನ್​ವೆಲ್ತ್​ನಂತಹ ಬೃಹತ್​ ಹಗರಣಗಳೇ ನೆನಪಾಗುತ್ತಿದ್ದವು. 12 ವರ್ಷದಲ್ಲಿ ಮೋದಿ ಸರ್ಕಾರ ಒಂದೇ ಒಂದು ಹಗರಣವಿಲ್ಲದೇ ಬಡವರಿಗೆ ಯೋಜನೆ ನೀಡುತ್ತಿದೆ. ಮಾತೆತ್ತಿದರೆ ಅದಾನಿ, ಅಂಬಾನಿ ಎಂದು ಟೀಕಿಸುವ ಕಾಂಗ್ರೆಸ್ಸಿಗರು, ಬೆಂಗಳೂರಿನ ಟನಲ್​ ರೋಡ್​ ಕಾಮಗಾರಿಗೆ ಅದಾನಿ ಸಮೂಹದ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.
ಮಾಜಿ ಸಂಸದ ಡಾ.ಉಮೇಶ ಜಾಧವ್​ ಮಾತನಾಡಿ, ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಸ್ಪಂದಿಸಿದೆ. ಜಿಲ್ಲೆಯಲ್ಲಿ 1021 ಕೋಟಿ ರೂ. ವೆಚ್ಚದ 71 ಕಿ.ಮೀ ಉದ್ದದ ಭಾರತಮಾಲಾ ರಸ್ತೆ ನಿರ್ಮಿಸಲಾಗುತ್ತಿದೆ. ಮೆಗಾ ಟೆಕ್ಸ್​ಟೈಲ್​ ಪಾರ್ಕ್​ ಜಿಲ್ಲೆಗೆ ಮಂಜೂರಾಗಿದೆ. ವಂದೇ ಭಾರತ್​ ಸೌಲಭ್ಯ ದೊರಕಿದೆ. ಜಲ್​ ಜೀವನ ಮಿಷನ್​ ಯೋಜನೆ ಅಡಿ ನೂರಾರು ಹಳ್ಳಿ, ತಾಂಡಾಗಳಿಗೆ ನೀರು ಪೂರೈಕೆ ಆಗುತ್ತಿದೆ ಎಂದರು.
ಮುಖಂಡ ಅವ್ವಣ್ಣ ಮ್ಯಾಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ದೀರ್ಘಕಾಲದ ಪ್ರಧಾನಿಯಾಗಿ ದೇಶ ಮುನ್ನಡೆಸಿರುವ ಮೋದಿ, ಅಂಬೇಡ್ಕರ್​ ಆಶಯದಂತೆ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ರಾಜ್ಯದಲ್ಲಿ 40 ಸಾವಿರ ಸಸಿಗಳನ್ನು ನೆಡಲಾಗಿದೆ ಎಂದರು.
ಜಿಲ್ಲಾಧ್ಯಕ್ಷರಾದ ಚಂದು ಪಾಟೀಲ್​, ಅಶೋಕ್​ ಬಗಲಿ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ್​, ಮಾಜಿ ಎಂಎಲ್​ಸಿ ಅಮರನಾಥ ಪಾಟೀಲ್​, ಮುಖಂಡರಾದ ಶರಣಪ್ಪ ತಳವಾರ, ನಿತೀನ್​ ಗುತ್ತೇದಾರ, ಸಿದ್ದಾಜಿ ಪಾಟೀಲ್​, ಚನ್ನಮ್ಮ ಪಾಟೀಲ್​, ಶೋಭಾ ಬಾಣಿ, ಸುಧಾ ಹಾಲಕಾಯಿ, ಲಿಂಗರಾಜ ಬಿರಾದಾರ, ಹರ್ಷಾನಂದ ಗುತ್ತೇದಾರ, ಗಿರಿರಾಜ ಯಳಮೇಲಿ, ಗಿರೀಶ ಭಜಂತ್ರಿ ಇತರರಿದ್ದರು. ಶಿವಯೋಗಿ ನಾಗನಹಳ್ಳಿ ವಂದಿಸಿದರು. ಮಹಾದೇವ ಬೆಳಮಗಿ ನಿರೂಪಣೆ ಮಾಡಿದರು.
ಪ್ರಿಯಾಂಕ್​ ರ್ಖಗೆ ಅಜ್ಜ ಎಂಎಸ್​ಕೆ ಮಿಲ್​ನಲ್ಲಿ ದುಡಿಯುತ್ತಿದ್ದರು. ಅಂತಹ ನೌಕರಿ ನೀಡುವ ಪಿಎಂ ಮಿತ್ರ ಯೋಜನೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಯೋಜನೆ ವಿಳಂಬ ಮಾಡಬಾರದು. ಕೇಂದ್ರ ಸರ್ಕಾರದಿಂದ ಕಲಬುರಗಿ ನಗರದ ರಿಂಗ್​ ವೃತ್ತ ರಸ್ತೆ ಮಾಡಲಾಗಿದೆ. ಜೆಜೆಎಂ ನೀರು ಪೂರೈಕೆ ಕ್ರಾಂತಿ ಮಾಡಲಾಗಿದೆ.
-> ಡಾ.ಉಮೇಶ ಜಾಧವ್​, ಮಾಜಿ ಸಂಸದ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net