ಮೋದಿ ವಿದೇಶ ಪ್ರವಾಸವಲ್ಲ, ಪ್ರಗತಿಗೆ ಪಥ

rajkumar telkur
rajkumar telkur
Published on

ಪ್ರಮುಖ ಮುಖ್ಯಾಂಶಗಳು

  • ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿಕೆ
  • ರಾಹುಲ್​ ಗಾಂಧಿ, ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಕಿಡಿ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಐದು ದೇಶಗಳಿಗೆ ಹೋಗಿದ್ದು, ಪ್ರವಾಸ, ಮೋಜು ಮಸ್ತಿಗಲ್ಲ. ವಿಕಸಿತ ಭಾರತಕ್ಕೆ ಬಲ ತುಂಬಲು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲು ಎಂಬುದನ್ನು ರಾಹುಲ್​ ಗಾಂಧಿ, ಪ್ರಿಯಾಂಕ್​ ರ್ಖಗೆ ಅರಿಯಬೇಕು, ಮೋದಿ ಅವರಿಗೆ 32 ದೇಶದ ಅತ್ಯುನ್ನತ ಗೌರವ ದೊರಕ್ಕಿದ್ದು, ಲಾಭಿಯಿಂದ ಅಲ್ಲ ಅವರ ಬಲಿಷ್ಠ ಭಾರತದ ನಿರ್ಮಾಣಕ್ಕೆ ಶ್ರಮಿಸುತ್ತಿರುವುದಕ್ಕೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ರಾಜಕುಮಾರ ಪಾಟೀಲ್​ ತೆಲ್ಕೂರ ಹೇಳಿದರು.
ಮೋದಿ ಭಾರತದ ಉತ್ಪನ್ನವಾದ ಚಾಕ್ಲೆಟ್​ನ್ನು ಉಡುಗೊರೆ ನೀಡಿದ್ದನ್ನು ಲೇವಡಿ ಮಾಡುವ ನೈತಿಕತೆ ಕಾಮಾಲೆ ಕಣ್ಣಿನ ರಾಹುಲ್​ ಗಾಂಧಿ, ಪ್ರಿಯಾಂಕ್​ ರ್ಖಗೆಗೆ ಇಲ್ಲ. ಹಿಂದೆ ಕಾಂಗ್ರೆಸ್ಸಿನ ನೆಹರು ಚೀನಾಕ್ಕೆ, ಇಂದಿರಾ ಗಾಂಧಿ ಶ್ರೀಲಂಕಾಕ್ಕೆ ನಡುಗಡ್ಡೆಯನ್ನು ಬಿಟ್ಟುಕೊಟ್ಟಿದ್ದು, ದೇಶ ಮರೆತ್ತಿಲ್ಲ. ಹಿಂದೆಯೂ ರೇಷ್ಮೆ ಸೀರೆ, ಕಸೂತಿ ವಸ್ತು, ಕೈಮಗ್ಗ, ಭಗವದ್ಗೀತೆ ಪುಸ್ತಕ ನೀಡುವುದು ವಾಡಿಕೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐದು ದೇಶ ಮಹತ್ವದ ಒಪ್ಪಂದ: ನರೇಂದ್ರ ಮೋದಿ ಐದು ದೇಶಗಳಿಗೆ ಭೇಟಿ ನೀಡಿದ್ದು, ಮಹತ್ವದ ಐತಿಹಾಸಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಸೌದಿ ಅರೇಬಿಯಾದ ಜತೆಗೆ 30 ಮಿಲಿಯನ್​ ಬ್ಯಾರಲ್​ ಕಚ್ಚಾ ತೈಲ ಸಂಸ್ಕರಣೆಗೆ ಒಪ್ಪಂದ ಮಾಡಿಕೊಂಡಿದ್ದು, 5 ಮಿಲಿಯನ್​ ಡಾಲರ್​ ಹಣ ಯುಎಇಯಿಂದ ಭಾರತದಲ್ಲಿ ಹೂಡಲು ಒಪ್ಪಂದವಾಗಿದೆ ಎಂದರು.
ನೆದರಲ್ಯಾಂಡ್​ ಜತೆಗೆ ಸೆಮಿಕಂಡಕ್ಟರ್​ ಚಿಪ್​ ತಯಾರಿಸಲು 11 ಮೀಲಿಯನ್​ ಹೂಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಸ್ವಿಡನ್​ನಲ್ಲಿ 6ಜಿ ತಂತ್ರಜ್ಞಾನದ ವರ್ಗಾವಣೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನಾರ್ವೇಗೆ 43 ವರ್ಷಗಳ ನಂತರ ಭಾರತದ ಪ್ರಧಾನಿ ಭೇಟಿ ನೀಡಿದ್ದು, ಭಾರತದಲ್ಲಿ 100 ಮಿಲಿಯನ್​ ಡಾಲರ್​ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇಟಲಿ ದೇಶಕ್ಕೆ ಭೇಟಿ ನೀಡಿದಾಗ ಯುಎಇ, ಸೌದಿ, ಇಸ್ರೇಲ್​ ಮೂಲಕ ಯುರೋಪ ರಾಷ್ಟ್ರಗಳಿಗೆ ಭಾರತದ ಉತ್ಪನ್ನಗಳು ಸಾಗಣೆ, ಮಧ್ಯಪ್ರಾಚ್ಯ ಕಾರಿಡಾರ್​ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರಿಂದ ಸಾಗಾಣಿಕೆ ದರ, ಸಮಯದಲ್ಲಿ ಶೇ.50 ಉಳಿತಾಯ ಆಗಲಿದೆ. ಇಂತಹ ಮಹತ್ವದ ಒಪ್ಪಂದಗಳಿಂದ ಭಾರತಕ್ಕೆ ಬಲ ಬರಲಿದ್ದು, ಏನನ್ನು ಅರಿಯದೇ ಅಪಹಾಸ್ಯ ಮಾಡುವುದು ಸಲ್ಲದು, ದೇಶದ ಜನರು ಇದನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ಬಸವರಾಜ ಬೆಣ್ಣೂರಕರ್​, ಲಿಂಗರಾಜ ಬಿರಾದಾರ, ಬಾಬುರಾವ ಹಾಗರಗುಂಡಗಿ, ಸಚಿನ ಕಡಗಂಚಿ, ಮಹೇಂದ್ರ ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net