ಕಲಬುರಗಿ: ಜಿಲ್ಲೆಯಲ್ಲಿ ಕೋಲಿ&-ಕಬಲಿಗ ಸಮುದಾಯದವರನ್ನು ಗುರಿಯಾಗಿಸಿಕೊಂಡು ಹತ್ಯೆ, ಅತ್ಯಾಚಾರ ಹಾಗೂ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿವೆ. ಅದಕ್ಕೆ ಸಾ ದೇವಲಗಾಣಗಾಪುರದಲ್ಲಿ ನಡೆದ ದತ್ತು ಖರ್ಚಿ ಮೇಲಿನ ಹಲ್ಲೆಯಾಗಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು, ಯುವಕನಿಗೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾ ಕೋಲಿ&-ಕಬಲಿಗ ಸಮನ್ವಯ ಸಮಿತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನೂರಾರು ಜನರು ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ಜು.24ರಂದು ಆಟೋ ಚಾಲಕ ದತ್ತು ಖರ್ಚಿ (ಮಾಗಣಗೇರಿ) ಮೇಲೆ ದುಷ್ಕರ್ಮಿಗಳು ಭೀಕರ ಹಲ್ಲೆ ನಡೆಸಿದ್ದು, ಯುವಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಯುವಕನ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು, ಸಂತ್ರಸ್ತ ಯುವಕನಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಜಿಲ್ಲೆಯಲ್ಲಿ ಕೋಲಿ ಸಮಾಜದವರ ಮೇಲೆ ನಿರಂತರ ಹಲ್ಲೆ, ಅತ್ಯಾಚಾರ ನಡೆಯುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಹೇಳಿಕೊಂಡು ಅಟ್ರಾಸಿಟಿ ಕೇಸ್ ಹಾಕುವ ಬೆದರಿಕೆ ಒಡ್ಡಲಾಗುತ್ತಿದೆ. ಕೋಲಿ ಸಮಾಜದವರನ್ನು ಅಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ಸೇರಿ ಎಲ್ಲೆಡೆ ನಿರಂತರವಾಗಿ ಹಲ್ಲೆಗಳಾಗಿವೆ, ಕೊಲೆಗಳಾಗಿವೆ. ಕಿರುಕುಳ ನೀಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಬಂದರವಾಡ ಗ್ರಾಮದ ವಿದ್ಯುತ್ ಅವಘಡ ಸಂತ್ರಸ್ತ ಲಕ್ಷ್ಮಣ ಕೇಳಕರ ಎರಡು ಕೈ ಕಳೆದುಕೊಂಡಿದ್ದು, ಪರಿಹಾರಕ್ಕೆ ವರ್ಷಗಟ್ಟಲೇ ತಿರುಗಾಡಿದರೂ ಸ್ಪಂದಿಸುತ್ತಿಲ್ಲ. ಜಿಲ್ಲೆಯಲ್ಲಿ ದಿನಕ್ಕೊಂದು ನೆಪ ಹೇಳಿ ತಳವಾರ ಸಮುದಾಯದವರಿಗೆ ಎಸ್ಟಿ ಪ್ರಮಾಣ ಪತ್ರ ವಿತರಿಸದೇ ಸತಾಯಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಪಿಎಸ್ಐ ಅಮಾನತು ಮಾಡಿ: ದೇವಲಗಾಣಗಾಪುರದ ದತ್ತು ಖರ್ಚಿ ಮೇಲೆ ಹಲ್ಲೆಗೆ ಮುನ್ನವೇ, ಆರೋಪಿಗಳು ಅಪರಾಧ ಎಸಗಿದ್ದರು. ಆದರೆ ದೇವಲಗಾಣಗಾಪುರದ ಪಿಎಸ್ಐ ರಾಜಿ ಮಾಡಿ, ಕಳುಹಿಸಿದ್ದರಿಂದ ಕೃತ್ಯ ಸಂಭವಿಸಿದೆ. ಪ್ರಸಿದ್ಧ ಯಾತ್ರಾಸ್ಥಳ ದೇವಲಗಾಣಗಾಪುರದಲ್ಲಿ ಗಾಂಜಾ, ಡ್ರಗ್ಸ್, ಮಟಕಾ, ಜೂಜು ಕ್ಲಬ್, ವೇಶ್ಯಾವಾಟಿಕೆ ಹಾಗೂ ಅಕ್ರಮ ಮರಳುಗಾರಿಕೆ ಮುಕ್ತವಾಗಿ ನಡೆಯುತ್ತಿವೆ. ಪೊಲೀಸರು ಲಂಚ ಪಡೆದು ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಅಪರಾಧ ತಡೆಯಲು ವಿಫಲರಾಗಿದ್ದು, ಕರ್ತವ್ಯಲೋಪ ಎಸಗಿದ ಪಿಎಸ್ಐಯನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೋಲಿ ಸಮಾಜದವರನ್ನು ಗುರಿಯಾಗಿ ಜಿಲ್ಲೆಯಲ್ಲಿ ನಿರಂತರ ಹಲ್ಲೆ, ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ಹೇಳುವವರು, ಕೇಳುವವರು ಇಲ್ಲದಂತಾಗಿದೆ. ದೇವಲಗಾಣಗಾಪುರದ ದತ್ತು ಖರ್ಚಿ ಮೇಲೆ ಹಲ್ಲೆ ಆಗಿದ್ದರೂ ಜಿಲ್ಲಾಡಳಿತದಿಂದ ಯಾರೂ ಭೇಟಿ ನೀಡಿಲ್ಲ. ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಬ್ರೋಕರ್ಗಳೇ ಆಡಳಿತ ನಡೆಸುವಂತಾಗಿದೆ. ಸಚಿವ ರ್ಖಗೆ ಇತ್ತ ಸ್ವಲ್ಪ ಗಮನ ಹರಿಸಬೇಕು.