ಕಲಬುರಗಿ: ಭಗವಾನ ಗೌತಮ ಬುದ್ಧರ ರೂಪ ಪ್ರತಿಷ್ಠಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ನಿಮಿತ್ತ ಜೇವರ್ಗಿಯಲ್ಲಿ ಮೇ 15ರಿಂದ ಮೂರು ದಿನ "ಡಾ.ಬಿ.ಆರ್.ಅಂಬೇಡ್ಕರ್ ಅರಿವು ಉತ್ಸವ' ಹಮ್ಮಿಕೊಳ್ಳಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪುಂಡಲೀಕ ಗಾಯಕವಾಡ ತಿಳಿಸಿದರು.
ಬುದ್ಧರ ಮೂರ್ತಿ ಮೆರವಣಿಗೆ, ಸ್ವಾಮೀಜಿ ಹಾಗೂ ಚಿಂತಕರಿಂದ ವಿಶೇಷ ಉಪನ್ಯಾಸ ನಡೆಯಲಿವೆ. 15ರಂದು ಬೆಳಗ್ಗೆ 10ಕ್ಕೆ ಭಗವಾನ ಗೌತಮ ಬುದ್ಧರ ಮೂರ್ತಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆ ನಡೆಯಲಿದೆ. ಅಂದಿನ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಣದೂರು ಬುದ್ಧ ವಿಹಾರದ ಭಂತೆ ವರಜ್ಯೋತಿ ನೆಲೋಗಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಚಿಂತಕ ಸುರೇಶ ಗೌತಮ, ಸಾಹಿತಿ, ಪತ್ರಕರ್ತ ಶಿವರಂಜನ ಸಂತ್ಯಂಪೇಟೆ ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
16ರಂದು ನಡೆಯುವ ಕಾರ್ಯಕ್ರಮದಲ್ಲಿ ಸೊನ್ನ ವಿರಕ್ತಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಚಿಗರಹಳ್ಳಿ ಗುರುಪೀಠದ ಶ್ರೀ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಶಾಂತಾ ಅಷ್ಟಗಿ, ಆಳಂದ ಬಿ.ಆರ್ಸಿ ಚಂದ್ರಶೇಖರ ಕಟ್ಟಿಮನಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಅದ್ಧೂರಿ ಮೆರವಣಿಗೆ 17ಕ್ಕೆ : ಜೇವರ್ಗಿಯಲ್ಲಿ 17ರಂದು ಬೆಳಗ್ಗೆ 11ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಮೆರವಣಿಗೆ ವಿಜಯಪುರ ಕ್ರಾಸ್ನಿಂದ ಬಹಿರಂಗ ಸಭೆ ವೇದಿಕೆವರೆಗೆ ಅದ್ಧೂರಿಯಾಗಿ ನಡೆಯಲಿದೆ. ಪಿಎಸ್ಐ ಗಜಾನಂದ ಬಿರಾದಾರ ಚಾಲನೆ ನೀಡಲಿದ್ದಾರೆ. ಬುದ್ಧೂಷ ದೇವಿಂದ್ರ ಹೆಗಡೆ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. ಅಣದೂರು ಬುದ್ಧವಿಹಾರದ ಭಂತೆ ವರಜ್ಯೋತಿ, ಮೈಸೂರು ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಶ್ರೀ ಡಾ.ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ, ರಾಷ್ಟ್ರೀಯ ಖ್ಯಾತ ಚಿಂತಕ ರಾಜರತ್ನ ಅಂಬೇಡ್ಕರ್ ಮುಖ್ಯ ಭಾಷಣಕಾರರಾಗಿ ಹಾಗೂ ಶಾಸಕ ಡಾ.ಅಜಯ್ಸಿಂಗ್ ಪಾಲ್ಗೊಳ್ಳಿದ್ದಾರೆ.