ರೇವಗ್ಗಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ

Revaggi Development Authority
Revaggi Development Authority
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಪ್ರಿಯಾಂಕ್​ ರ್ಖಗೆಗೆ ಮನವಿ ಪತ್ರ ಸಲ್ಲಿಕೆ
ಕಲಬುರಗಿ: ಕಮಲಾಪುರ ತಾಲೂಕಿನ ಚಿಂಚೋಳಿ ಮತಕ್ಷೇತ್ರದ ವ್ಯಾಪ್ತಿಯ ರೇವಗ್ಗಿ (ರಟಗಲ್ಲ)ಯ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದೇವಾಲಯದ ಸರ್ವಾಂಗೀಣ ಅಭಿವೃದ್ಧಿಗಾಗಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಪ್ರಿಯಾಂಕ್​ ರ್ಖಗೆ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಕಾರ್ಯದರ್ಶಿ ನಾಗಲಿಂಗಯ್ಯ ಮಠಪತಿ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಸಚಿವರಿಗೆ ಮನವಿ ಸಲ್ಲಿಸಿ, ಪ್ರಾಚಿನ ಪರಂಪರೆಯ, ಭವ್ಯ ಇತಿಹಾಸ ಹೊಂದಿದ ರೇವಗ್ಗಿ, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ರಾಜ್ಯ ಸೇರಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ದಕ್ಷಿಣ ಭಾರತದಾದ್ಯಂತ ಭಕ್ತ ಸಮೂಹ ಹೊಂದಿದೆ. ಪವಿತ್ರ ಶ್ರಾವಣ ಮಾಸ ಸೇರಿ ಹಬ್ಬ ಹರಿದಿನಗಳಲ್ಲಿ ಪಲ್ಲಕ್ಕಿ ಉತ್ಸವ, ರಥೋತ್ಸವ ವೇಳೆ ಲಕ್ಷಾಂತರ ಭಕ್ತರು ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದರ್ಶನ ಆರ್ಶಿವಾದಕ್ಕಾಗಿ ಧಾರ್ಮಿಕ ಯಾತ್ರೆ ಕೈಗೊಳ್ಳುತ್ತಾರೆ ಎಂದು ಮನವರಿಕೆ ಮಾಡಿದರು.
ಶ್ರೀ ಕ್ಷೇತ್ರದಲ್ಲಿ ಸುಸಜ್ಜಿತ ಕೋಣೆ, ಶುದ್ಧ ಕುಡಿಯುವ ನೀರು ಸೇರಿ ಹಲವು ಮೂಲಸೌಲಭ್ಯಗಳ ಕೊರತೆ ಇದೆ. ರಾಜ್ಯ ಸರ್ಕಾರದ ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ಅಡಿಯ ದೇವಾಲಯ ಕಲಬುರಗಿ ಜಿಲ್ಲೆಯಲ್ಲಿ ಎ ಗ್ರೇಡ್​ ದೇವಾಲಯವಾಗಿದ್ದು, ಪ್ರತಿವರ್ಷ ಲಕ್ಷಾಂತರ ರೂ. ಆದಾಯ ಹೊಂದಿದೆ ಎಂದು ತಿಳಿಸಿದರು.
ಜಗದ್ಗುರು ರೇವಣಸಿದ್ದೇಶ್ವರ ದೇವಾಲಯದ ಸಮಗ್ರ ಅಭಿವೃದ್ಧಿ ಜತೆಗೆ ದೇವಾಲಯ ಬೆಟ್ಟದ ಪರಿಸರ ಹೊಂದಿದ್ದು ಪ್ರವಾಸಿ ತಾಣವನ್ನಾಗಿ ರೂಪಿಸಲು ಪ್ರಾಧಿಕಾರದ ಅಗತ್ಯವಿದೆ ಎಂದರು. ಮನವಿ ಸ್ವೀಕರಿಸಿದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ್​, ಮುಖಂಡರಾದ ಸಂಜುಕುಮಾರ ಶೆಟ್ಟಿ, ಸಾಗರ ಜೈನ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net