ಡಿಕೆಶಿ ಹೆಸರು ಕೆಡಿಸಲು ಷಡ್ಯಂತ್ರ: ಪ್ರಣವಾನಂದ ಸ್ವಾಮೀಜಿ ಆರೋಪ

pranavananda swamiji
pranavananda swamiji
Published on
ಕಲಬುರಗಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಹೆಸರನ್ನು ಕೆಡಿಸಿ, ಅವಧಿಗೂ ಮುನ್ನವೇ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಕಾಂಗ್ರೆಸ್​ ಪಕ್ಷದ ಒಳಗಿನ ಕೆಲವು ಶಕ್ತಿಗಳೇ ಯತ್ನಿಸುತ್ತಿವೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಲು ನಾವೆಲ್ಲರೂ ಹೇಗೆ ದೃಢ ಸಂಕಲ್ಪ ಮಾಡಿದ್ದೆವು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರಲು ಹಾಗೂ ಸಂಘಟಿಸಲು ಶಿವಕುಮಾರ ಅಪಾರ ಶ್ರಮ ಹಾಕಿದ್ದಾರೆ. ಆದರೆ, ಈಗ ಸಿಎಂ ಪಟ್ಟ ಅಲಂಕರಿಸಿದ ಬೆನ್ನಲ್ಲೇ, ಅವರದೇ ಪಕ್ಷದ ಕೆಲವು ಆಂತರಿಕ ಶಕ್ತಿಗಳು ವ್ಯವಸ್ಥಿತವಾಗಿ ಅವರ ವಿರುದ್ಧ ಹುನ್ನಾರ ನಡೆಸುತ್ತಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಅವಧಿಗೂ ಮುನ್ನವೇ ಅವರನ್ನು ಕೆಳಗಿಳಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿರುವುದರಿಂದ, ಸಿಎಂ ಅತ್ಯಂತ ಜಾಗರೂಕರಾಗಿರಬೇಕು. ನಾವೆಲ್ಲರೂ ಶೀಘ್ರದಲ್ಲೇ ಮಹತ್ವದ ಸಭೆ ನಡೆಸಿ, ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಸೂಕ್ತ ಸಲಹೆ ಹಾಗೂ ಎಚ್ಚರಿಕೆಯ ಸೂಚನೆಗಳನ್ನು ನೀಡಲಿದ್ದೇವೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಗಾಣಿಗರ ಜಗದ್ಗುರು ಶ್ರೀ ಪ್ರಣವಾನಂದ ಪುರಿ ಮಹಾಸ್ವಾಮೀಜಿ, ರಾಷ್ಟ್ರೀಯ ಅಧ್ಯಕ್ಷ ಶ್ರೀ ಬಸವನಾಗಿದೇವ ಶರಣರು, ವಿಶ್ವಕರ್ಮ ಸಮಾಜದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಕುಂಬಾರ ಸಮುದಾಯದ ಬಸವ ಮೂರ್ತಿ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಮಾದಿಗ ಸಮುದಾಯದ ಶಿವಮೂರ್ತಿ ಸ್ವಾಮೀಜಿ ಸೇರಿ ರಾಜ್ಯದ ವಿವಿಧ ಭಾಗಗಳ 25ಕ್ಕೂ ಹೆಚ್ಚು ಅತಿ ಹಿಂದುಳಿದ ಸಮುದಾಯಗಳ ಮಠಾಧೀಶರು ಇದ್ದರು.
ಅತಿ ಹಿಂದುಳಿದ ಮಠಾಧೀಶರ ಮಹಾಸಭೆ ರ್ನಿಣಯ: ಅತಿ ಹಿಂದುಳಿದ ಮಠಾಧೀಶರ ಮಹಾಸಭೆ ಎರಡು ದಿನಗಳ ಚಿಂತನ ಶಿಬಿರದಲ್ಲಿ ನೂತನ ಮುಖ್ಯಮಂತ್ರಿ ಶಿವಕುಮಾರ್​ಗೆ ಗೌರವ ಸನ್ಮಾನ ಏರ್ಪಡಿಸುವುದು ಸೇರಿ ಅತಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪ್ರಮುಖ ರ್ನಿಣಯ ಕೈಗೊಳ್ಳಲಾಗಿದೆ. ಮುಖ್ಯವಾಗಿ ಮಡಿವಾಳ, ಸವಿತಾ ಸಮಾಜ, ಈಡಿಗ, ಉಪ್ಪಾರ, ಗಾಂಗಿಕುಲ ಸೇರಿ ಕ್ಯಾಟಗರಿ 1 ಮತ್ತು 2ರಲ್ಲಿರುವ ಅತ್ಯಂತ ಸಣ್ಣ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮಾನವ ಶಾಸ್ತ್ರ ತಜ್ಞರಿಂದ ಕುಲಶಾಸ್ತ್ರ ಅಧ್ಯಯನ ನಡೆಸಲು ಸರ್ಕಾರವನ್ನು ಒತ್ತಾಯಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ಅವಮಾನಿಸುವ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾಸಭೆಯು ರಾಜ್ಯ ಸರ್ಕಾರಕ್ಕೆ ಆಗ್ರಹ ಮಂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net