ಕಾಂಗ್ರೆಸ್​ನಿಂದ ಒಳಮೀಸಲು ಮಹಾಮೋಸ: ಬಂಜಾರ ಸಮಾಜ ಕಿಡಿ

banjara samaj
banjara samaj
Published on

ಪ್ರಮುಖ ಮುಖ್ಯಾಂಶಗಳು

  • ಬಂಜಾರ, ಬೋವಿ, ಕೊರಮ, ಕೊರಚರಿಗೆ ಅನ್ಯಾಯ
ಕಲಬುರಗಿ: ಕಾಂಗ್ರೆಸ್​ ಸರ್ಕಾರ ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ಲಂಬಾಣಿ ಸೇರಿ ಬಂಜಾರ, ಬೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಜನಸಂಖ್ಯೆ ಮತ್ತು ಸಾಮಾಜಿಕ ಹಿಂದುಳಿದ ಸ್ಥಿತಿ ಪರಿಗಣಿಸಿ ನ್ಯಾಯಯುತ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್​ ಹಟಾವೋ- ತಾಂಡಾ ಬಚಾವೋ ಚಳುವಳಿ ಆರಂಭಿಸಲಾಗುವುದು ಎಂದು ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಶಾಸಕ ಕೃಷ್ಣಾ ನಾಯಕ್​ ಎಚ್ಚರಿಕೆ ನೀಡಿದರು.
ಸುಪ್ರೀಂ ಕೋರ್ಟ್​ ಆದೇಶದಂತೆ ಒಳ ಮೀಸಲಾತಿಯನ್ನು ನ್ಯಾಯಯುತವಾಗಿ ಹಂಚಿಕೆ ಮಾಡುವ ಬದಲು ಸರ್ಕಾರ ಮಂಡಿಸಿರುವ ವಿಧೇಯಕದಲ್ಲಿ ಬಂಜಾರ (ಲಂಬಾಣಿ), ಬೋವಿ, ಕೊರಮ ಮತ್ತು ಕೊರಚ ಸಮುದಾಯಗಳಿಗೆ ಅನ್ಯಾಯ ಎಸಗಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಸರ್ಕಾರ ಒಳ ಮೀಸಲಾತಿಯ ಅವೈಜ್ಞಾನಿಕ ಹಂಚಿಕೆ ಮೂಲಕ ಬಂಜಾರ ಸಮಾಜದ ವಿರುದ್ಧ ಸೇಡಿನ ರಾಜಕಾರಣ ನಡೆಸುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಲಂಬಾಣಿ, ಬೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಶೇ.4 ಮೀಸಲಾತಿ ಹಾಗೂ ಅಲೆಮಾರಿ ಸಮುದಾಯಕ್ಕೆ ಶೇ.1 ಮೀಸಲಾತಿ ನಿಗದಿಪಡಿಸಿರುವುದು ನ್ಯಾಯಸಮ್ಮತವಾಗಿಲ್ಲ. ಲಂಬಾಣಿ, ಬೋವಿ, ಕೊರಮ ಹಾಗೂ ಕೊರಚ ಸಮುದಾಯಗಳಿಗೆ ಶೇ.5 ಮತ್ತು ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ.1 ಮೀಸಲಾತಿ ನೀಡುವಂತೆ ಆಗ್ರಹಿಸಿದರು.
ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಒಳಮೀಸಲಾತಿ ಹಂಚಿಕೆ ಮಾಡಿದ್ದು, ಇದನ್ನು ಕೂಡಲೇ ಮರುಪರಿಶೀಲಿಸಿ ಅಲೆಮಾರಿ ಸಮುದಾಯವನ್ನು ಪ್ರತ್ಯೇಕ ವರ್ಗವಾಗಿ ಪರಿಗಣಿಸಿ ನ್ಯಾಯಯುತ ಮೀಸಲಾತಿ ನೀಡಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಚಿವ ಬಾಬುರಾವ ಚವ್ಹಾಣ್​, ಮಾಜಿ ಸಂಸದ ಡಾ.ಉಮೇಶ ಜಾಧವ, ಶಾಸಕ ಅವಿನಾಶ ಜಾಧವ, ಮಹೇಂದ್ರ ನಾಯಕ್​, ಲಿಂಬ್ಯಾ ನಾಯಕ್​, ಸುರೇಶ ಜಾಧವ, ನಾಮದೇವ ರಾಠೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net