ಕೇಂದ್ರೀಯ ವಿಶ್ವವಿದ್ಯಾಲಯದ ಪಿಜಿ ಪ್ರವೇಶ ಪ್ರಕ್ರಿಯೆ ಶುರು

central university karnatak
central university karnatak
Published on
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ 2026&-27ನೇ ಶೈಕ್ಷಣಿಕ ಸಾಲಿಗೆ ಅನ್​ಲೈನ್​ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಿಯುಇಟಿ (ಪಿಜಿ) ಅಥವಾ ಜಿಎಟಿಇ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಅರ್ಹ ಅಭ್ಯರ್ಥಿಗಳು ಸಿಯುಕೆ ಸಮರ್ಥ್​ ಪೋರ್ಟಲ್​ ಮೂಲಕವೇ ಪ್ರವೇಶಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಸಾಮಾನ್ಯ, ಓಬಿಸಿ, ಇಡಬ್ಲ್ಯೂಎಸ್​. ಬಿ ವರ್ಗ ವಿದ್ಯಾರ್ಥಿಗಳು 500 ರೂ., ಎಸ್ಸಿ, ಎಸ್ಟಿ, ಇವಿಡಬ್ಲ್ಯೂಡಿ ಅಭ್ಯರ್ಥಿಗಳು 100 ರೂ. ಶುಲ್ಕ ಭರಿಸಿ ಜೂ.10ರ ಬೆಳಗ್ಗೆ 11 ಗಂಟೆವರೆಗೆ ನೋಂದಣಿ ಮಾಡಿಕೊಳ್ಳಬೇಕು. ಪ್ರತ್ಯೇಕ ವಿಷಯಕ್ಕೆ ಅರ್ಜಿ ಸಲ್ಲಿಸುವವರು ಪ್ರತ್ಯೇಕ ನೋಂದಣಿ ಶುಲ್ಕ ಭರಿಸಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೆರಿಟ್​ ಮತ್ತು ಲಭ್ಯ ಮೀಸಲಾತಿಯನ್ವಯ ಜೂ.10ರಂದು ಬೆಳಗ್ಗೆ 11 ನೋಂದಾಯಿತ ಅಭ್ಯರ್ಥಿಗಳ ಪಟ್ಟಿಯನ್ನು ವಿವಿ ಅಂತರ್ಜಾಲದಲ್ಲಿ ಪ್ರಕಟಿಸಿ ಜೂ.11ರ ಬೆಳಗ್ಗೆ 11ಗಂಟೆವರೆಗೆ ಆಕ್ಷೇಪಣೆ ಆಹ್ವಾನಿಸಲಾಗುತ್ತದೆ ಎಂದರು.
ಪ್ರಸ್ತುತ ಸಿ.ಯು.ಕೆ.ಯಲ್ಲಿ ಎರಡು ವರ್ಫಿ ಅವಧಿಯ 34 ಪಿ.ಜಿ. ಕೋರ್ಸ್​ ಗಳು, ಒಂದು ವರ್ಷದ 15 ಪಿ.ಜಿ. ಕೋರ್ಸ್​ಗಳಿದ್ದು, ಪ್ರಸಕ್ತ ವರ್ಷದಿಂದ 3500 ವಿದ್ಯಾರ್ಥಿಗಳು ಕ್ಯಾಂಪಸ್​ನಲ್ಲಿ ಇರಲಿದ್ದು, ಎಲ್ಲರಿಗೂ ಹಾಸ್ಟೆಲ್​ ಸೌಲಭ್ಯವಿದೆ ಎಂದರು.
6 ಹೊಸ ಕೋರ್ಸ್​: ವಿವಿಯಲ್ಲಿ ಪ್ರಸಕ್ತ ವರ್ಷದಿಂದ ಎಂಎಸ್ಸಿ ಇನ್​ ಜೆನೆಟಿಕ್ಸ್​ ಮತ್ತು ಜಿನೋಮಿಕ್ಸ್​, ಎಂಎಸ್ಸಿ (ಪ್ರಾಣಿಶಾಸ್ತ್ರ), ಎಂಎಸ್ಸಿ (ಸಸ್ಯಶಾಸ್ತ್ರ), ಎಂಎಸ್ಸಿ (ಸಂಖ್ಯಾಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆ), ಎಂಟೆಕ್​ ಇನ್​ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನ ಹಾಗೂ ಮಾಸ್ಟರ್​ ಆಫ್​ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನ ಕೋರ್ಸ್​ ಆರಂಭಿಸಲಾಗುತ್ತಿದೆ ಎಂದು ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.
ಪ್ರಭಾರಿ ಕುಲಸಚಿವ ಹಾಗೂ ಕಾನೂನು ನಿಕಾಯ ಡೀನ್​ ಪ್ರೊ.ಬಸವರಾಜ್​ ಕುಬಕಡ್ಡಿ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೋಟ ಸಾಯಿಕೃಷ್ಣ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಸಿನ್ನೂರ, ಸಹಾಯಕ ಕುಲಸಚಿವ ಶ್ರೀಕಾಂತ ಕುಸೂರ ಇತರರಿದ್ದರು.
ಕಕ ಶೇ.8 ಮೀಸಲಾತಿ
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ 371ಜೆ ಅನ್ವಯ ಶೇ.8 ಮೀಸಲಾತಿ ಇದ್ದು, ಪ್ರದೇಶದ ವಿದ್ಯಾರ್ಥಿಗಳು ಲಾಭ ಪಡೆಯಬೇಕು. ತಲಾ ವಿಷಯಗಳಲ್ಲಿ ಮೂರು ಸ್ಥಾನಗಳು ದೊರೆಯಲಿವೆ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ಕೌಶಲ ಅಭಿವೃದ್ಧಿ ಕಾರ್ಯಕ್ರಮ
ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪಿಜಿ ವಿದ್ಯಾರ್ಥಿಗಳಿಗೆ ಎನ್​ಬಿಸಿಸಿ ಸಂಸ್ಥೆಯ ಸಿಎಸ್​ಆರ್​ ನಿಧಿ ಅಡಿ ಮೂರು ತಿಂಗಳ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. ಮೂರು ತಿಂಗಳ ಕೋರ್ಸ್​ ಇರಲಿದ್ದು, ಮಾಸಿಕ ಮೂರು ಸಾವಿರ ರೂ. ಗೌರವ ಸಂಭಾವನೆ ಇರುತ್ತದೆ. ತರಗತಿ ಹೊರತುಪಡಿಸಿ ನಿತ್ಯ 1.30 ಗಂಟೆ ಹೆಚ್ಚುವರಿ ಸಮಯದಲ್ಲಿ ಬೋಧನೆ ಇರಲಿದೆ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ಸ್ವಾಯತ್ತ ಸಂಸ್ಥೆ, ರಾಜಕೀಯವಿಲ್ಲ
ವಿಶ್ವವಿದ್ಯಾಲಯವೂ ಸ್ವಾಯತ್ತ ಸಂಸ್ಥೆಯಾಗಿದ್ದು, ಇಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಸರ್ಕಾರದ ಯಾವುದೇ ಸಚಿವಾಲಯ, ಸಂಸ್ಥೆಗಳು ವಿವಿಯೊಂದಿಗೆ ಒಪ್ಪಂದ ಮಾಡಿಕೊಂಡರೆ ನಾವೇ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಸ್ಥಳಿಯ ಜನಪ್ರತಿನಿಧಿಗಳಿಗೆ ಹಲವು ಕಾರ್ಯಕ್ರಮಗಳಿಗೆ ಆಹ್ವಾನ ಪತ್ರ ನೀಡಲಾಗುತ್ತದೆ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ವಚನ ಸಂಪುಟ ಭಾಷಾಂತರ ಪೂರ್ಣ
ಕೇಂದ್ರೀಯ ವಿಶ್ವವಿದ್ಯಾಲಯದಿಂದ ಬಸವ ಸಮಿತಿಯ ಒಪ್ಪಂದದೊಂದಿಗೆ ಸಮಗ್ರ ವಚನ ಸಂಪುಟವನ್ನು ಜರ್ಮನ್​, ಸ್ಪೇನಿಷ್​, ಜಪಾನಿ ಭಾಷೆಗೆ ಭಾಷಾಂತರ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪುಸ್ತಕಗಳು ಮುದ್ರಣವಾಗಿವೆ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು. ವಿವಿಯ ವಿದೇಶ ಭಾಷೆ ವಿಭಾಗದ ಡಾ.ಕುಮಾರಮಂಗಲಂ ಸ್ಪಾನಿಷ್​ ಭಾಷೆಗೆ ವಚನಗಳನ್ನು ಅನುವಾದಿಸಿದ್ದಾರೆ. ಪಿಯಾಲಿರಾಯ್​ ಅವರು ಜಪಾನಿಸ್​ ಭಾಷೆಗೆ, ಶಿವಮ ಮಿಶ್ರಾ ಜರ್ಮನ್​ ಭಾಷೆಗೆ ಅನುವಾದಿಸಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯವೂ ಸಹಯೋಗ ನೀಡಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net