

ಕಲಬುರಗಿ: ನಗರದಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಹಾವಳಿಗೆ ಧರಿಯಾಪುರ-ಕೋಟನೂರ ಜಿಡಿಎ ಬಡಾವಣೆಯ ಬಾಲಕನೊಬ್ಬ ಬಲಿಯಾದ ಹೃದಯ ವಿದ್ರಾವಕ ಘಟನೆ ಶುಕ್ರವಾರ ನಡೆದಿದೆ.
ಮನೋಜ (4) ಎಂಬಾತನೇ ಬೀದಿ ಕಚ್ಚಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಬಾಲಕ. ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪ ಪೂಜಾರಿ ಎಂಬುವರ ಪುತ್ರ ಎಂದು ತಿಳಿದು ಬಂದಿದೆ.
ಜಂಬಗಾ ಗ್ರಾಮದ ಶರಣಬಸಪ್ಪ ಹೊಟ್ಟೆಪಾಡಿಗಾಗಿ ಕುಟುಂಬ ಸಮೇತರಾಗಿ ಕಲಬುರಗಿಗೆ ಆಗಮಿಸಿ, ಧರಿಯಾಪುರ-ಕೋಟನೂರ ಜಿಡಿಎ ಬಡಾವಣೆಯಲ್ಲಿ ಇರುವ ರಾಯಲ್ ಪ್ಯಾಲೇಸ್ ಪಂಕ್ಷನ್ ಹಾಲ್ದಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಕೂಲಿ ಇನ್ನಿತರ ಮನೆಗೆಲಕ್ಕೆ ಹೋಗುತ್ತಿದ್ದರು.
ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಬಾಲಕ ಗಾಣದೇವತೆ ದೇವಾಲಯ ರಸ್ತೆಯಲ್ಲಿ ಬಾಲಕ ಮನೋಜ ಆಟವಾಡುತ್ತಿರುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆಯಲ್ಲಿ ಆತನ ಹೊಟ್ಟೆ ಸೇರಿದಂತೆ ದೇಹದ ಹಲವು ಕಡೆಗಳಲ್ಲಿ ಮನಬಂದಂತೆ ಕಚ್ಚಿವೆ. ನಾಯಿ ಕಚ್ಚಿ ಜಗ್ಗಾಡಿದ್ದರಿಂದ ಬಾಲಕನ ಹೊಟ್ಟೆಯಲ್ಲಿ ಕರಳು ಸಹ ಕಿತ್ತುಕೊಂಡು ಹೊರ ಬಂದಿದ್ದವು ಎಂದು ಪ್ರತ್ಯಕ್ಷದರ್ಶಿಗಳು ವಿಜಯವಾಣಿಗೆ ತಿಳಿಸಿದ್ದಾರೆ.
ಬೀದಿ ನಾಯಿಗಳ ದಾಳಿ ಮಾಡಿದಾಗ ಬಾಲಕ ಕಿರುಚಾಡುತ್ತಿದ್ದನ್ನು ಕೇಳಿ ಮನೆಯಿಂದ ಹೊರ ಬಂದ ನಿವೃತ್ತ ಶಿಕ್ಷಕ ಶಿವಪುತ್ರಪ್ಪ ಕೋಣಿನ್ ಅವರು ನಾಯಿಗಳನ್ನು ಹೊಡೆದೊಡಿಸಿ ಬಾಲಕನನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಪೋಷಕರೊಂದಿಗೆ ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಸ್ಥಿತಿ ಗಂಭೀರವಾಗಿದ ಎಂದು ಹೇಳಿ ಪ್ರಾಥಮಿಕ ಚಿಕಿತ್ಸೆ ನೀಡಿ ಉನ್ನತ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಸಲಹೆ ನೀಡಿದ್ದಾರೆ. ಅದರ ಬೆನ್ನಲ್ಲಿಯೇ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಿಸದೆ ಬಾಲಕ ಕೊನೆಯುಸಿರೆದಿದ್ದಾನೆ ಎಂದು ಗೊತ್ತಾಗಿದೆ.
ಆಟವಾಡಲು ಹೋದ ಮಗ ಹೆಣವಾದ ಎಂದು ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಬಡಾವಣೆಯ ಜನರು ಸೇರಿಕೊಂಡು ಸಂತೈಸಿದರು.ಬಾಲಕ ಶವವನ್ನು ಆ್ಯಂಬುಲೆನ್ಸದಲ್ಲಿ ಜಂಬಗಿಗೆ ಪೋಷಕರು ತೆಗೆದುಕೊಂಡು ತೆರಳಿದರು. ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಎಚ್ಚೆಚ್ಚುಕೊಳ್ಳದೆ ಹೋದರೆ ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗ ಸಾಧ್ಯತೆ ಇದೆ.