ಕಲಬುರಗಿ: ಅನುಭವ ಮಂಟಪ ರಾಷ್ಟ್ರದ ಮೊದಲ ಸಂಸತ್ತು. ಎಲ್ಲ ಜಾತಿ, ಜನಾಂಗದ ಶರಣರನ್ನು ಒಂದೇ ವೇದಿಕೆಗೆ ಕರೆತಂದು ಸಮಾನತೆ, ಸಹೋದರತ್ವ, ಸಹಬಾಳ್ವೆಗೆ ಬಸವಣ್ಣನವರು ನಾಂದಿ ಹಾಡಿದ್ದರು. ಹೀಗಾಗಿ ಬಸವತತ್ವ ವೈಜ್ಞಾನಿಕ ತಳಹದಿ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಈಶ್ವರ ಖಂಡ್ರೆ ಪ್ರತಿಪಾದಿಸಿದರು.
ಶಹಾಬಜಾರ್ ಸುಲಫಲ ಮಠದಲ್ಲಿ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ 12ನೇ ವರ್ಷದ ಪೀಠಾರೋಹಣ ಮತ್ತು 60ನೇ ವರ್ಧಂತಿ ಮಹೋತ್ಸವ ನಿಮಿತ್ತ ಶುಕ್ರವಾರ ಆರಂಭಿಸಿದ ವಚನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ 650 ಕೋಟಿ ವೆಚ್ಚದ ಅನುಭವ ಮಂಟಪ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 450 ರೂ. ಖರ್ಚಾಗಿದೆ. ಇನ್ನೂ 250 ಕೋಟಿ ಬಿಡುಗಡೆಗೆ ಸಿಎಂ ಒಪ್ಪಿದ್ದಾರೆ. ಶರಣ ಗ್ರಾಮ ನಿರ್ಮಾಣ ಜತೆ ವೈಾನಿಕ ಲಿಂಗಪೂಜೆ ಕಲಿಸುವ ಕೇಂದ್ರವೂ ಇದರಲ್ಲಿ ಒಳಗೊಂಡಿದೆ ಎಂದು ಹೇಳಿದರು.
ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಮಠ-ಮಾನ್ಯಗಳ ಕೊಡುಗೆ ಅಪಾರ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಅದ್ಭುತ ಕೊಡುಗೆ ನೀಡುತ್ತಿವೆ. 12ನೇ ಶತಮಾನದಲ್ಲಿ ಸಮಾನತೆಗೆ ಬಸವಣ್ಣ ಕ್ರಾಂತಿ ಮಾಡಿದರೆ, ಈಗಿನ ಮಠಗಳು, ಮಠಾಧೀಶರು ಜ್ಞಾನ, ಅನ್ನ, ಶೈಕ್ಷಣಿಕ ದಾಸೋಹ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಕಾಯಕದಲ್ಲಿ ಪ್ರಾಮಾಣಿಕತೆ ಇರಬೇಕು. ಕೈಲಾಗದವರೊಂದಿಗೆ ಕೈಜೋಡಿಸುವ ಮನಸ್ಸು ಇರಬೇಕು ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಬಸವತತ್ವ ಆಧಾರದ ಮೇಲೆ ಸುಲಫಲ ಶ್ರೀಗಳು ಸಮಾಜದ ಕಟ್ಟಕಡೆಯ ಮನುಷ್ಯನ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯ ಜತೆ ಸುಲಫಲ ಮಠ, ತಾಜಸುಲ್ತಾನಪುರ ಮಠ ಹಾಗೂ ಶ್ರೀಶೈಲಂ ಸಾರಂಗ ಮಠಗಳನ್ನು ಅದ್ಭುತವಾಗಿ ಬೆಳೆಸಿದ್ದಾರೆ. ಬಡ-ಬಗ್ಗರ ಸೇವೆ ಜತೆ ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತಿದ್ದಾರೆ ಎಂದು ಕೊಂಡಾಡಿದರು.
ಸ್ವಾಗತ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಸುಲಫಲ ಶ್ರೀಗಳು ದಲಿತರು, ಹಿಂದುಳಿದವರು ಸೇರಿ ಎಲ್ಲರನ್ನು ಸಮನಾಗಿ ಕಾಣುವ ಮನೋಭಾವ ಹೊಂದಿದ್ದಾರೆ. ಮಠ ಬೆಳೆಸುವುದರ ಜತೆ ಕಡುಬಡವರ ಪರ ನಿಲ್ಲುವ ಇಂತಹ ಸ್ವಾಮಿಗಳು ಬಲು ಅಪರೂಪ. ಇಂತಹ ಮಠಗಳ ಬಗ್ಗೆ ಸಚಿವ ಈಶ್ವರ ಖಂಡ್ರೆ ಗಮನಹರಿಸಿ ಆರ್ಥಿಕ ನೆರವು ಒದಗಿಸಬೇಕು ಎಂದು ಮನವಿ ಮಾಡಿದರು.
ಹಂದಿಗೊಂದದ ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಅಭಿನಂದನೆ ಸುಲಫಲ ಶ್ರೀಗಳಿಗಾಗಿ ಅಲ್ಲ, ಸಮಾಜದ ಸೇವೆಗಾಗಿ ಈ ಗೌರವ. ಸ್ವಾಮೀಜಿಗಳು ನಿರಂತರ ಕೆಲಸ ಮಾಡಿದರೂ ಅನೇಕರು ನಿಂದಿಸುತ್ತಾರೆ. ಇದೆಲ್ಲ ಎದುರಿಸಿ ಸಮಾಜದ ಪರ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸುಲಫಲ ಶ್ರೀಗಳು ಅದ್ಭುತ ಕೆಲಸ ಮಾಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಅನೇಕ ಸ್ವಾಮಿಗಳು ಹಾಗೂ ಜನಸಾಮಾನ್ಯರ ಬೆನ್ನಹಿಂದೆ ನಿಂತಿದ್ದಾರೆ. ಇತಿಹಾಸದಲ್ಲಿ ಉಳಿಯುವ ಸ್ವಾಮಿಗಳಾಗಿದ್ದಾರೆ ಎಂದು ಶ್ಲಾಸಿದರು.
ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶ್ರೀ ನಿಜಗುಣಾನಂದ ಸ್ವಾಮೀಜಿ, ಶರಣಬಸವ ದೇವರು, ಶಾಸಕ ರಹೀಮ್ ಖಾನ್, ಮಾಜಿ ಮೇಯರ್ ಶರಣಕುಮಾರ ಮೋದಿ, ನಿವೃತ್ತ ಅಪರ ನಿಬಂಧಕ ಶರಣಬಸಪ್ಪ ಬೆಣ್ಣೂರ, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಮಲ್ಲಯ್ಯ ಸ್ವಾಮಿ ಅಷ್ಟಗಿ ಇತರರಿದ್ದರು. ಸೊನ್ನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ನಿರೂಪಣೆ ಮಾಡಿದರು.