ಕಲಬುರಗಿ: ನಗರದ ಗುಬ್ಬಿ ಕಾಲನಿಯಲ್ಲಿ ಭಾನುವಾರ ರಾತ್ರಿ ರವಿ ಗುತ್ತೇದಾರ್ ಎಂಬಾತನನ್ನು ಬರ್ಬರವಾಗಿ ಹಲ್ಲೆ ಮಾಡಿ, ಕೊಲೆಗೈದ ಐವರು ಆರೋಪಿಗಳನ್ನು ನಗರದ ಎಂಬಿ ನಗರ ಪೊಲೀಸರು ಬಂಧಿಸಿದ್ದಾರೆ.
ನರೋಣಗಲ್ಲಿಯ ಅಬ್ದುಲ್ ಇಮ್ತಿಯಾಜ್, ಛೋಟಾ ರೋಜಾದ ಅಬ್ದುಲ್ ಸಮೀರ, ಯಾದುಲ್ಲಾ ಕಾಲನಿಯ ಮೊಹ್ಮದ್ ಸರ್ರಾಜ್, ಹೈದರಾಬಾದ್ನ ಮೊಹ್ಮದ್ ಖಲೀಲ್, ಮಿಲತ್ ನಗರದ ಮೊಹ್ಮದ್ ಸಿಯೋದ್ದೀನ್ ಬಂಧಿತ ಆರೋಪಿಗಳು. ಬಂಧಿತರಿಂದ ಆಟೋ ರಿಾ, ಚಾಕುಗಳನ್ನು ಜಪ್ತಿ ಮಾಡಲಾಗಿದೆ.
ಸೋಮವಾರ ನಸುಕಿನ ಜಾವ ನಗರದ ಆದರ್ಶ ನಗರದ ನಿವಾಸಿ, ಟೀ ಪಾಯಿಂಟ್ ಕೆಲಸಗಾರ ರವಿ ಗುತ್ತೇದಾರ್ನನ್ನು ಬಾರ್ವೊಂದರ ಬಳಿ ಮಾರಕಾಸ್ತ್ರಗಳಿಂದ ಬರ್ಬರ ಹಲ್ಲೆ ಮಾಡಿ, ಕೊಲೆ ಮಾಡಿದ್ದರು. ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಈ ಕುರಿತು ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸಿಪಿ ಶಿವನಗೌಡ ಪಾಟೀಲ್, ಪಿಐ ಖಾಜಾ ಹುಸೇನ್ ನೇತೃತ್ವದಲ್ಲಿ ಸಿಬ್ಬಂದಿ ರಾಜಕುಮಾರ ಟಾಕಳೆ, ದಸ್ತಯ್ಯ, ಸಂತೋಷ, ನಾಗರಾಜ, ಮಹೇಶ, ಕಾಶಿರಾಮ ಅವರ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.
ಹಳೇ ದ್ವೇಷ, ಕುಡಿತ ಚಟಕ್ಕೆ ಬಲಿ? ಕೊಲೆಗೀಡಾದ ರವಿ ಗುತ್ತೇದಾರ್ ಈತನೂ ರೋಜಾ ಠಾಣೆ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಆ ಪ್ರಕರಣದಲ್ಲಿ ಕೊಲೆಗೀಡಾದನ ಸಂಬಂಧಿಕರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದರು. ಬಂಧಿತ ಆರೋಪಿ ಅಬ್ದುಲ್ ಸಮೀರ್ನ ಸಹೋದರನೂ ರವಿ ಗುತ್ತೇದಾರ್ ಜತೆಗೆ ಸೇರಿ ಕುಡಿತದ ಚಟಕ್ಕೆ ದಾಸನಾಗಿ, ಮೃತಪಟ್ಟಿದ್ದಾನೆ ಎಂದು ದ್ವೇಷಿಸಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.