

ಜನರ ಆಶಯದಂತೆ ಚರ್ಚೆ ನಡೆಸಿ ಅಭಿವೃದ್ದಿಯ ನೀಲಿನಕ್ಷೆ ತಯಾರಿಸಲಾಗುವುದು / ನಿಪುಣ ಕರ್ನಾಟಕ ಯೋಜನೆ
ಕಲಬುರಗಿ ಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಯ ಐವಾನ್ ಶಾಹಿ ಅತಿಥಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಸಾಮಾನ್ಯವಾಗಿ ಸಚಿವ ಸಂಪುಟ ಸಭೆಯಲ್ಲಿ ಇಡೀ ರಾಜ್ಯದ ಅಭಿವೃದ್ದಿ ಕುರಿತಂತೆ ಚರ್ಚೆ ನಡೆಯುತ್ತದೆ. ಆದರೆ, ಬಹಳ ವರ್ಷಗಳ ನಂತರ ಕಲಬುರಗಿ ಯಲ್ಲಿ ನಡೆಯುತ್ತಿರುವ ಸಂಪುಟ ಸಭೆಯಲ್ಲಿ ನಮ್ಮ ಭಾಗದ ಜನರ ಆಶಯದಂತೆ ಚರ್ಚೆ ನಡೆಸಿ ಅಭಿವೃದ್ದಿಯ ನೀಲಿನಕ್ಷೆ ತಯಾರಿಸಲಾಗುವುದು ಎಂದರು.
ನಿಪುಣ ಕರ್ನಾಟಕ ಯೋಜನೆ
ಕಕ ಭಾಗದದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. " ಈ ನಿಟ್ಟಿನಲ್ಲಿ ಈಗಾಗಲೇ ಕೌಶಲ್ಯಾಭಿವೃದ್ದಿ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಜಂಟಿ ವತಿಯಿಂದ " ನಿಪುಣ - ಕರ್ನಾಟಕ " ಎನ್ನುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆ ಇದ್ದು ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ " ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.
ಶಾಸಕರ, ಅಧಿಕಾರಗಳ ಸಭೆ
ಸಚಿವ ಸಂಪುಟ ಸಭೆ ನಡೆಸುವ ಹಿನ್ನೆಲೆಯಲ್ಲಿ ಕಕ ಭಾಗಕ್ಕೆ ಅಗತ್ಯವಿರುವ ಯೋಜನೆಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲು ಈಗಾಗಲೇ ಸಂಬಂಧಿಸಿದ ಕ್ಷೇತ್ರಗಳ ಶಾಸಕರ ಹಾಗೂ ಅಧಿಕಾರಿಗಳ ಜೊತೆ ಎರಡು ಸುತ್ತಿನ ವಿಸಿ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಚರ್ಚಿಸಲಾಗಿದೆ.
ಸಿಎಸ್ ಜತೆ ಸಭೆ
ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ನಾಳೆ ಸಭೆ ನಡೆಸಲಾಗುವುದು. ಇದೇ ರೀತಿ ಸಚಿವರ ಸಭೆ ನಡೆಸಲು ಸಿಎಂ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಪ್ರತ್ಯೇಕ ಸಚಿವಾಲಯ
ಆರ್ಟಿಕಲ್ 371 (J) ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಕುರಿತಂತೆ ಬೇಡಿಕೆ ಎದ್ದಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆಯೂ ಕೂಡಾ ಚರ್ಚಿಸಲಾಗುವುದು. ಆರ್ಟಿಕಲ್ 371 (J) ಅಡಿಯಲ್ಲಿ ಈ ಭಾಗದಲ್ಲಿ 22,000 ಇಂಜಿನಿಯರಿಂಗ್ ಹಾಗೂ 2000 ವೈದ್ಯಕೀಯ ಸೀಟು ಹಂಚಿಕೆಯಾಗಿವೆ. ಇದೂ ಕೂಡಾ ಕಟ್ಟುನಿಟ್ಟಿನ ಜಾರಿಯಲ್ಲವೇ? ಈ ಬಗ್ಗೆ ಟೀಕೆಗಳು ಸಹಜ. ಆದರೆ, ನಮ್ಮ ಪ್ರಾಮಾಣಿಕ ಪ್ರಯತ್ನ ನಡೆಯಲಿದೆ ಎಂದರು.
ಜಂಟಿ ಸಮೀಕ್ಷೆ
ಜಿಲ್ಲೆಯಲ್ಲಿ ಇತ್ತೀಚಿಗೆ ಬಿದ್ದ ಮಳೆಯಿಂದಾಗಿ ಹೆಸರು,ತೊಗರಿ, ಉದ್ದು ಬೆಳೆ ಹಾಳಾಗಿದ್ದು, ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸರ್ವೆಗೆ ಸೂಚಿಸಲಾಗಿದೆ. ಈಗಾಗಲೇ 15,000 ರೈತರು ದೂರು ಸಲ್ಲಿಸಿದ್ದು ಸಮೀಕ್ಷೆ ವರದಿ ಬಂದ ನಂತರ ಬೆಳೆ ಹಾಳಾದ ಸಂಪೂರ್ಣ ವಿವರ ದೊರಕಲಿದೆ ಎಂದರು.
ರಸ್ತೆ ಗುಂಡಿ ಮುಚ್ಚಲು ಅನುದಾನ ಬಿಡುಗಡೆ
ಮಳೆಯಿಂದ ಜಿಲ್ಲೆಯ ರಸ್ತೆಗಳು ಹಾಳಾಗಿದ್ದು ಗುಂಡಿ ಮುಚ್ಚಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಧ್ಯ ಮಳೆ ಬೀಳುತ್ತಿರುವುದರಿಂದ ಕೆಲಸ ನಡೆಯುತ್ತಿಲ್ಲ.ಸ್ವಲ್ಪ ಮಳೆ ಬಿಡುವಾದ ನಂತರ ಗುಂಡಿ ಮುಚ್ಚುವ ಕೆಲಸ ನಡೆಯಲಿದೆ. ಭೀಮಾ ಬ್ರಿಜ್ ಹಾಗೂ ದಂಡೋತಿ ಬ್ರಿಜ್ ಮೇಲಿನ ರಸ್ತೆ ರಿಪೇರಿಗಾಗಿ ಕೆಆರ್ ಐಡಿ ಎಲ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.