ಕಮಲಾಪುರ ಬಳಿ ಗೂಡ್ಸ್ ವಾಹನ​ ಡಿಕ್ಕಿಗೆ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು 7 ಮಂದಿ ಸಜೀವ ದಹನ

Bus Accident
Published on

ಕಲಬುರಗಿ : ಗೂಡ್ಸ್ ವಾಹನ ಮತ್ತು ಖಾಸಗಿ ಬಸ್ ಡಿಕ್ಕಿ ಹೊಡೆದು ಬಳಿಕ ಬಸ್ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡು ಏಳು ಜನರು ಸಹಜೀವ ದಹನಗೊಂಡ ಭೀಕರ ಅಪಘಾತ ಜಿಲ್ಲೆಯ ಕಮಲಾಪುರ ಸಮೀಪದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಮೃತರ ವಿವರ ಲಭ್ಯವಾಗಿಲ್ಲ. ಬಹುತೇಕ ಎಲ್ಲರ ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಹೀಗಾಗಿ ಗುರುತಿಸುವುದು ಕಷ್ಟವಾಗುವಂತಿದೆ.

ಕಮಲಾಪುರದಿಂದ ಹುಮನಾಬಾದ ಕಡೆಗೆ ಹೋಗುವ ಎರಡು ಕಿ ಮೀ ದೂರದಲ್ಲಿ ಮೊದಲು ಗೂಡ್ಸ್ ವಾಹನ ಬಸ್ ಪರಸ್ಪರ ಸ್ವಲ್ಪ ಪ್ರಮಾಣದಲ್ಲಿ ಡಿಕ್ಕಿ ಹೊಡೆದ ನಂತರ ಬಸ್ ಹಾಗೆ ಕೊಂಚ ದೂರ ಹೋಗಿ ಹೆದ್ದಾರಿಯಲ್ಲಿನ ಸೇತುವೆಗೆ ಡಿಕ್ಕಿ ಹೊಡೆದು ತಗ್ಗಿನಲ್ಲಿ ಉರುಳಿ ಬಿದ್ದಿದೆ. ಬೆನ್ನಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಗೋವಾದಿಂದ ಕಲಬುರಗಿ ಮಾರ್ಗವಾಗಿ ಹೈದರಾಬಾದ್ ಗೆ ಹೋಗುತ್ತಿತ್ತು. 407 ಗೂಡ್ಸ್ ಕಲಬುರಗಿ ಕಡೆಗೆ ಬರುತ್ತಿತ್ತು. ಅಪಘಾತ ಅತ್ಯಂತ ರಣ ಭೀಕರವಾಗಿದೆ. ಇಂತಹ ಘಟನೆ ನಾವು ನೋಡಿಲ್ಲ ಎಂದು ಪ್ರತ್ಯೇಕ್ಷದರ್ಶಿಗಳು ನೋವಿನಿಂದ ಹೇಳಿಕೊಂಡರು.

ಬಸ್ಸಿಗೆ ಬೆಂಕಿ ಹೊತ್ತಿಕೊಂಡ ವೇಳೆ ಒಳಗಿದ್ದ ಪ್ರಯಾಣಿಕರು ನಿದ್ರೆಯ ಮಂಪರಿನಲ್ಲಿದ್ದರು. ಹೀಗಾಗಿ ಹೊರ ಬರಲಾಗದೆ ಬೆಂಕಿಗೆ ಆಹುತಿಯಾಗಿದ್ದಾರೆ. ಇನ್ನೂ ಕೆಲವರು ಹರಸಾಹಸ ಮಾಡಿ ಗಾಜು ಒಡೆದು ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈಗ ರಕ್ಷಣಾ ಕಾರ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ನಡೆದಿದೆ.

ಸುಟ್ಟಿರುವ ಬಸ್ಸಿನಲ್ಲಿ 30 ಪ್ರಯಾಣಿಕರಿದ್ದರು. ಅವರಲ್ಲಿ ಹದಿನೈದು ಜನರು ಹೊರ‌ಬಂದಿರುವ ಲೆಕ್ಕ ಸಿಕ್ಕಿದೆ. ಇನ್ನೂ ಕೆಲವರು ಪಾರಾಗಿ ಹೊರ ಬಂದಿರುವಂತಿದೆ. ಬಸ್ಸಿನಲ್ಲಿ ಸಿಲುಕಿದವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಹೇಳಲಾಗುತ್ತಿದೆ.

ಸ್ತಳಕ್ಕೆ ಎಸ್ಪಿ ಇಶಾ ಪಂತ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಅವರು ದೌಡಾಯಿಸಿ ರಕ್ಷಣಾ ಕಾರ್ಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ‌. ಕಮಲಾಪುರ ಪೊಲೀಸರು ಸ್ಥಳದಲ್ಲಿ ಇದ್ದಾರೆ . ಸ್ಥಳೀಯರು ರಕ್ಷಣಾ ಕೆಲಸಕ್ಕೆ ಕೈಜೋಡಿಸಿದ್ದಾರೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net