ಕಲಬುರಗಿ ಜಿಲ್ಲೆಯ ೩೪೨೦ ಅಂಗನವಾಡಿ ಕೇಂದ್ರ : ೫೨೫ ಕೇಂದ್ರಗಳಲ್ಲಿ ಶೌಚಗೃಹವಿಲ್ಲ, ೬೪೦ರಲ್ಲಿ ವಿದ್ಯುತ್ತಿಲ್ಲ

B.G.PATIL
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಜಿಲ್ಲೆಯಲ್ಲಿ ಒಟ್ಟು ೩೪೨೦ ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ೫೨೫ ಕೇಂದ್ರಗಳಲ್ಲಿ ಶೌಚಗೃಹವಿಲ್ಲ, ೬೪೦ ಕೇಂದ್ರಗಳಲ್ಲಿ ವಿದ್ಯುತ್ತಿಲ್ಲ, ೧೧೨ ಕೇಂದ್ರಗಳಲ್ಲಿ ಫ್ಯಾನ್ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷಿö್ಮÃ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಸುವರ್ಣಸೌಧದಲ್ಲಿ ನಡೆದಿರುವ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಸಚಿವೆ ಹೆಬ್ಬಾಳಕರ್, ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ೯೩೧೫೧ ಮಕ್ಕಳು ಕಲಿಯುತ್ತಿವೆ. ಲಿಂಕ್ ಡಾಕ್ಯೂಮೆಂಟ್ ಯೋಜನೆ ಅಡಿ ಮೂಲಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಉಳಿದ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಲಭ್ಯ ಒದಗಿಸಲು ಕೆಕೆಆರ್‌ಡಿಬಿ ಯೋಜನೆ ಅಡಿ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವನೆ ಸಲ್ಲಿಸಲು ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ೧೫೬೮ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ೫೫೧೨೧ ಮಕ್ಕಳು ಕಲಿಯುತ್ತಿವೆ. ೧೪೮ ಕೇಂದ್ರಗಳಲ್ಲಿ ಶೌಚಗೃಹವಿಲ್ಲ, ೫೩ ಕೇಂದ್ರಗಳಲ್ಲಿ ವಿದ್ಯುತ್ ಇಲ್ಲ, ೫೩ ಕೇಂದ್ರಗಳಲ್ಲಿ ಫ್ಯಾನ್ ಇಲ್ಲ ಎಂದು ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳಿಲ್ಲದ ೬೨ ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ತಯಾರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಗುರುತಿಸಲಾಗಿದ್ದು, ಕಟ್ಟಡ ಮಂಜೂರಾತಿಗೆ ಕೆಕೆಆರ್‌ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಯಾದಗಿರಿ ಜಿಲ್ಲೆಯಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳಿಲ್ಲದ ೫೧ ಕೇಂದ್ರಗಳಿದ್ದು, ಶಾಲಾ ಕಟ್ಟಡ, ಸಮುದಾಯ ಭವನ, ಇತರ ಸರ್ಕಾರಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನಿವೇಶನ, ಅನುದಾನದ ಆಧಾರದ ಮೇರೆಗೆ ಹಂತ, ಹಂತವಾಗಿ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net