

ಚೇತನ್ ಚಕ್ಕೆರೆ ಬಿಡದಿ
ಗ್ರಾಮ ಅಂದ ಮೇಲೆ ಅದಕ್ಕೊಂದು ಇತಿಹಾಸ ಇರಬೇಕು. ಇಲ್ಲೊಂದು ಗ್ರಾಮ ಬಹಳ ವಿಶೇಷ ಹಾಗೂ ವಿಭಿನ್ನತೆ ಹೊಂದಿದೆ. ಹಲವು ಗ್ರಾಮಗಳ ಹೆಸರು ಇನ್ನೊಂದು ಕಡೆ ಕೇಳಲ್ಪಡುತ್ತವೆ. ಆದರೆ ಈ ಗ್ರಾಮದ ಹೆಸರು ಬೇರೆ ಎಲ್ಲೂ ಕೇಳಿ ಬರುವುದಿಲ್ಲ. ಈ ಗ್ರಾಮಕ್ಕೆ ಶ್ರೀರಾಮ ಹಾಗೂ ರಾಕ್ಷಸರ ಹೆಸರು ತಳುಕು ಹಾಕಿಕೊಂಡಿದೆ.
ಹೌದು... ಕಾಕರಾಮನಹಳ್ಳಿ ಎಂಬ ಗ್ರಾಮ ಈ ಭಾಗದಲ್ಲಿ ಹಲವು ವಿಶೇಷತೆಗಳಿಂದ ಹೆಸರು ವಾಸಿಯಾಗಿದೆ. ಇಲ್ಲಿನ ಪುರಾತನ ದೇವಾಲಯಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡುತ್ತಿರುವ ಗಣ್ಯರಿಂದ ಈ ಗ್ರಾಮದ ಹೆಸರು ಚಾಲ್ತಿಯಲ್ಲಿದೆ. ಬಿಡದಿ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿದೆ.
ಇಲ್ಲಿನ ಜನ ಪ್ರಮುಖವಾಗಿ ವ್ಯವಸಾಯ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ರೇಷ್ಮೆ ಹಾಗೂ ರಾಗಿ ಬೆಳೆ ಪ್ರಮುಖವಾಗಿದೆ. ಗ್ರಾಮದಿಂದ 5 ಕಿ.ಮೀ ದೂರದಲ್ಲಿ ಪ್ರವಾಸಿತಾಣವಾದ ಮಂಚನಬಲೆ ಜಲಾಶಾಯ ಸಿಗುತ್ತದೆ. ಇದಲ್ಲದೆ ಬಿಡದಿ ಭಾಗದ ಬಹುದೊಡ್ಡ ಕೆರೆ ಎನಿಸಿಕೊಂಡಿರುವ ನಲ್ಲಿಗುಡ್ಡೆ ಕೆರೆಯ ಹಿನ್ನೀರು ಹೊಂದುಕೊಂಡಂತ್ತಿದ್ದು, ನೂರಾರು ಎಕರೆಗೆ ರೈತರ ಜಮೀನಿಗೆ ನೀರು ಉಣಿಸುತ್ತಿದೆ.
ಶತಮಾನಗಳ ಹಿಂದೆ ಈ ಗ್ರಾಮದಲ್ಲಿ ಕಾಕಸ ಎಂಬ ರಾಕ್ಷಸ ನೆಲೆಸಿದ್ದ. ಗ್ರಾಮದ ಜನರಿಗೆ ಸಾಕಷ್ಟು ಉಪಟಳ ನೀಡುತ್ತಿದ್ದ. ಇದಲ್ಲದೆ ಅಕ್ಕ ಪಕ್ಕದ ಗ್ರಾಮಗಳ ಜನರಿಗೂ ತೊಂದರೆ ಕೊಡುತ್ತಿದ್ದ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಬೇಸತ್ತು ಹೋಗಿದ್ದರು. ಹೇಗಾದರೂ ಮಾಡಿ ಈ ರಾಕ್ಷಸನನ್ನು ಸಂಹಾರ ಮಾಡಬೇಕೆಂದು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಈ ವೇಳೆ ಗ್ರಾಮದ ಜನರು ಶ್ರೀರಾಮರ ಬಳಿ ಹೋಗಿ ಈ ಸಂಗತಿಯನ್ನು ತಿಳಿಸಿದ್ದರು. ವಿಷಯ ತಿಳಿದು ಗ್ರಾಮಕ್ಕೆ ಬಂದ ಶ್ರೀರಾಮರು ಕಾಕಸ ರಾಕ್ಷಕನನ್ನು ಅಲ್ಲಿಂದ ಹಿಡಿದುಕೊಂಡು ರಾಮನಗರದ ರಾಮದೇವರ ಬೆಟ್ಟಕ್ಕೆ ತಂದು ಸಂಹಾರ ಮಾಡಿದ್ದರಂತೆ. ಹಾಗಾಗಿ ಕಾಕಸ ರಾಕ್ಷಸ ಇದ್ದ ಹಾಗೂ ಶ್ರೀರಾಮ ಬಂದು ಹೋದ ಹಿನ್ನೆಲೆಯಲ್ಲಿ ಕಾಕರಾಮನಹಳ್ಳಿ ಹೆಸರು ಬಂದಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಈ ಗ್ರಾಮದಲ್ಲಿ ಹಲವು ಇತಿಹಾಸ ಪ್ರಸಿದ್ಧ ದೇವಾಲಯಗಳು ಇವೆ. ಶ್ರೀ ಬಸವೇಶ್ವರ ದೇವಾಲಯ , ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕ್ಯಾತಮ್ಮ ದೇವಾಲಯ, ಶ್ರೀ ಶನೈಶ್ವರ ಸ್ವಾಮಿ ದೇವಾಲಯ ಇದೆ. ಪ್ರತಿ ವರ್ಷ ದೇವರ ಹಬ್ಬಗಳನ್ನು ಬಹಳ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಕ್ಯಾತಮ್ಮ ದೇವಾಲಯಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಬರುವುದು ವಿಶೇಷವಾಗಿದೆ.
ಗ್ರಾಮದ ಹೆಸರು ಮತ್ತಷ್ಟು ಪ್ರಚಲಿತವಾಗಲು ವಸತಿ ಪ್ರದೇಶವೂ ಒಂದಾಗಿದೆ. ಗ್ರಾಮವನ್ನು ಹೊಂದಿಕೊಂಡಂತೆ ಕರ್ನಾಟಕ ಗೃಹ ಮಂಡಳಿ ನೂರಾರು ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಾಣ ಮಾಡಿದೆ. ಸುಮಾರು 499 ಎಕರೆ ವಿಸ್ತೀರ್ಣದ ನೇತಾಜಿ ಸುಭಾಷ್ ಚಂದ್ರ ಬೋಸ್ ಬಡಾವಣೆ ಎಂದು ನಾಮಕರಣ ಮಾಡಲಾಗಿದೆ. ಇದು ಕೂಡ ಗ್ರಾಮದ ಹೆಸರನ್ನು ಸೂಚಿಸುತ್ತದೆ.
ಗ್ರಾಮ ಬಹಳ ವರ್ಷಗಳ ಇತಿಹಾಸ ಹೊಂದಿದೆ. ಶ್ರೀ ರಾಮರು ನಮ್ಮ ಗ್ರಾಮಕ್ಕೆ ಬಂದು ಹೋಗಿದ್ದಾರೆ. ನಮ್ಮ ಗ್ರಾಮದಲ್ಲಿ 1500 ಜನಸಂಖ್ಯೆ ಇದ್ದು, ಇತಿಹಾಸ ಪ್ರಸಿದ್ಧ ದೇವಾಲಯಗಳು ಇಲ್ಲಿವೆ. ಸಾವನದುರ್ಗ ಹಾಗೂ ಮಂಚನಬಲೆ ಜಲಾಶಯದ ಪ್ರವಾಸಿ ತಾಣಗಳಿಗೆ ನಮ್ಮ ಗ್ರಾಮದಿಂದಲೇ ಹಾದು ಹೋಗಬೇಕಿದೆ.
ಹೇಮಂತ್, ಗ್ರಾಮಸ್ಥ