

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ
ಹೋಬಳಿಯ ಕೂನಗಲ್ ಮೂಡ್ಲಳ್ಳಿದೊಡ್ಡಿ ರಸ್ತೆಯಲ್ಲಿ ಗುಂಡಿಗಳೇ ತುಂಬಿರುವುದರಿಂದ ವಾಹನ ಸಂಚಾರ ಕಷ್ಟಕರವಾಗಿದೆ. ರಾಮನಗರ ಜಿಲ್ಲಾ ಕೇಂದ್ರ ಮತ್ತು ಕೈಲಾಂಚ ಹೋಬಳಿ ಕೇಂದ್ರ, ಕನಕಪುರ, ಹಾರೋಹಳ್ಳಿ ಕಡೆಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ.
ಹುಣಸನಹಳ್ಳಿ, ಕೂನಗಲ್, ಮೂಡ್ಲಳ್ಳಿದೊಡ್ಡಿ, ನಾಗೋಹಳ್ಳಿ, ವಡ್ಡರಹಳ್ಳಿ, ಗುನ್ನೂರು, ಹುಲಿಕೆರೆ, ಸಬ್ಬಕೆರೆ, ಜವಳಗೆರೆದೊಡ್ಡಿ ಗ್ರಾಮಗಳ ಮುಖಾಂತರ ಅರ್ಕಾವತಿ ನದಿ ತೀರದಲ್ಲೇ ರಸ್ತೆ ಸಾಗುತ್ತದೆ. ನಾಲ್ಕು ವರ್ಷಗಳ ಹಿಂದಷ್ಟೇ ಡಾಂಬರೀಕರಣಗೊಂಡ ರಸ್ತೆ ಇಂದು ಜಲ್ಲಿ ಕಲ್ಲಿನ ರಸ್ತೆಯಾಗಿ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಕಂಡು ಬರುತ್ತಿದೆ.
ಗುಂಡಿ ಮುಚ್ಚುವ ಕೆಲಸವನ್ನು ಇದುವರೆವಿಗೂ ಸಂಬಂಧಪಟ್ಟ ಇಲಾಖೆ ವಾಡಿಲ್ಲ. ಈಗ ಮಳೆಗಾಲವಾದ್ದರಿಂದ ಗುಂಡಿಗಳಲ್ಲಿ ನೀರು ನಿಂತು ದ್ವಿಚಕ್ರವಾಹನಗಳ ಅಪಘಾತಗಳಿಗೆ ಕಾರಣವಾಗುತ್ತಿದೆ.
ದಿನ ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೆಂದ್ರ ರಾಮನಗರ ಮತ್ತು ಹೋಬಳಿ ಕೆಂದ್ರ ಕೈಲಾಂಚಕ್ಕೆ ಈ ರಸ್ತೆಯ ಮೂಲಕ ನೂರಾರು ಮಂದಿ ಸಂಚರಿಸುತ್ತಾರೆ. ರಸ್ತೆ ಹದಗೆಟ್ಟಿದ್ದು ಸಂಚಾರ ನಡೆಸಲು ಅನುಕೂಲವಾಗುವಂತೆ ರಸ್ತೆ ಅಭಿವೃದ್ಧಿಪಡಿಸಿ ಉತ್ತಮ ರಸ್ತೆ ಕಲ್ಪಿಸಬೇಕು ಎಂಬುವುದು ಈ ಭಾಗದ ಜನರ ಒತ್ತಾಯವಾಗಿದೆ.
ರಸ್ತೆ ಸರಿಮಾಡುವಂತೆ ಜನಪ್ರತಿನಿಧಿಗಳಲ್ಲಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ರಸ್ತೆ ಅಭಿವೃದ್ಧಿ ಪಡಿಸುವಂತೆ ಎರಡೆರಡು ಭಾರಿ ಪ್ರತಿಭಟನೆ ಕೂಡ ನಡೆಸಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಮನವರಿಕೆ ವಾಡಲಾಗಿದೆ. ಆದರೂ ಅಧಿಕಾರಿಗಳು ರಸ್ತೆ ಅಭಿವೃದ್ಧಿ ವಾಡುತ್ತೇವೆ ಎಂಬ ಉತ್ತರದಲ್ಲೇ ಕಾಲದೂಡುತ್ತಿದ್ದಾರೆ.
ಅಪ್ಪಾಜಣ್ಣ ಹುಣಸನಹಳ್ಳಿ ಗ್ರಾಮದ ರೈತ
ಕೂನಗಲ್ ಮೂಡ್ಲಳ್ಳಿದೊಡ್ಡಿ ಮುಖಾಂತರ ಹುಣಸನಹಳ್ಳಿಯಿಂದ ಕೈಲಾಂಚ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿಗೆ ಇಲಾಖೆ ಮುಂದಾಗಲಿದೆ.
ಕೆ.ಎಚ್.ಶಂಕರ್, ಎಇಇ, ಪಿಡಬ್ಲೂೃಡಿ ರಾಮನಗರ
ರಸ್ತೆಯಲ್ಲಿ ಕ್ರಷರ್ ಲಾರಿಗಳ ಹೆಚ್ಚಿನ ಓಡಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈಗಾಗಲೇ ಗ್ರಾಮಸ್ಥರು ಪ್ರತಿಭಟನೆ ವಾಡಿ ಕ್ರಷರ್ ಲಾರಿಗಳ ಓಡಾಟಕ್ಕೆ ತಡೆಯೊಡ್ಡಿದ್ದಾರೆ. ರಸ್ತೆಯಲ್ಲಿ ಹೆಚ್ಚಿನ ಗುಂಡಿಗಳು ಇರುವ ಕಾರಣ ವಾಹನ ಸವಾರರು ರಸ್ತೆಯಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದು, ಸಂಬಂಧಪಟ್ಟ ಇಲಾಖೆ ಗುಣಮಟ್ಟದ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕಿದೆ.
ರವಿ, ಮೂಡ್ಲಳ್ಳಿದೊಡ್ಡಿ ಗ್ರಾಮಸ್ಥರು.