

ನಾಪೋಕ್ಲು: ಬೆಟ್ಟಗೇರಿ ಸಮೀಪದ ಭಕ್ಕದಲ್ಲಿರುವ ಸ್ತ್ರೀಶಕ್ತಿ, ಗಜಾನನ ಭಕ್ತ ಮಂಡಳಿ ಸಹಯೋಗದಲ್ಲಿ 17ನೇ ವರ್ಷದ ಕೈಲ್ ಮುಹೂರ್ತ ಅಂಗವಾಗಿ ಇತ್ತೀಚೆಗೆ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ ಕೈಲ್ ಮುಹೂರ್ತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ತಹಸೀಲ್ದಾರ್ ಸೂದನ ಮೋಹನ್ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾಳು ಹೆಕ್ಕುವುದು, ಕಪ್ಪೆಜಿಗಿತ, ಮ್ಯಾರಥಾನ್, 100 ಮೀಟರ್ ಓಟ, ಮೂರು ಕಾಲಿನ ಓಟ, ಗೋಣಿಚೀಲದ ಓಟ, ಮಹಿಳೆಯರಿಗೆ ಏರ್ ಗನ್ ಶೂಟಿಂಗ್, ನೀರು ಚೆಂಬಿನ ಓಟ, ನಿಂಬೆಹಣ್ಣು ಚಮಚದ ಓಟ, ಬಕೆಟ್‌ಗೆ ಚೆಂಡು ಹಾಕುವುದು, ಹಗ್ಗಜಗ್ಗಾಟ, ವಾದ್ಯಕುಣಿತ ಸ್ಪರ್ಧೆಗಳು ಮಕ್ಕಳು, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆದವು.
ಸಮಾರೋಪ ಸಮಾರಂಭ: ನಿವೃತ್ತ ತಹಸೀಲ್ದಾರ್ ಸೂದನ ಮೋಹನ್ ಮಾತನಾಡಿ, ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯವನ್ನು ಬೆಸೆಯುತ್ತವೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ಹೊರಬಂದು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡಾ ಸಮಿತಿ ಅಧ್ಯಕ್ಷ ಬೈತಡ್ಕ ದೇವಯ್ಯ ಸಮಾರೋಪ ಸಮಾರಂಭ ಉದ್ಘಾಟಿಸಿದರು. ನಿವೃತ್ತ ಹಾನರರಿ ಕ್ಯಾಪ್ಟನ್ ಬಾಡನ ಲೋಕೇಶ್, ನ್ಯಾಯಾಧೀಶರಾದ ನೈಯ್ಯಣಿ ದಿನೇಶ್ ಅವರ ಅನುಪಸ್ಥಿತಿಯಲ್ಲಿ ಪತ್ನಿ ಸುಷ್ಮಾ ದಿನೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಇತರರು ಹಾಜರಿದ್ದರು.