ಇಲ್ಲಿ ಕುಣಿದಾಡಿಕೊಂಡು ಸಂಚಾರ! : ಕೈಕಂಬ-ಪೊಳಲಿ ಸಂಪರ್ಕ ರಸ್ತೆಯಲ್ಲಿ ಓಡಾಟ ಅಸಹನೀಯ

New Project (4)
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಿಂದ ಪೊಳಲಿ ಸಂಪರ್ಕಿಸುವ ರಸ್ತೆಯ ಡಾಂಬರು ಅಲ್ಲಿಲ್ಲಿ ಕಿತ್ತು ಹೋಗಿ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣಗೊಂಡಿವೆ. ಒಂದು ಹೊಂಡಕ್ಕೆ ಮತ್ತೊಂದು ಹೊಂಡ ಉಚಿತ ಎನ್ನುವಂತೆ ರಸ್ತೆಯಲ್ಲಿ ಗುಂಡಿಗಳು ತುಂಬಿಕೊಂಡು ವಾಹನ ಸಂಚಾರ ಅಸಹನೀಯವಾಗಿದೆ. ಬಿ.ಸಿ.ರೋಡಿನಿಂದ ಪೊಳಲಿ, ಕಟೀಲು ಮೊದಲಾದ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಗೆ, ಬಜ್ಪೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸದ್ಯ ಅಧೋಗತಿಗೆ ತಲುಪಿದೆ. ಮಳೆಗಾಲಕ್ಕೆ ಮುನ್ನವೇ ಈ ತಿರುವುಮುರುವು ರಸ್ತೆಯಲ್ಲಿ ಸಣ್ಣ ಸಣ್ಣ ಹೊಂಡಗಳು ಇದ್ದು ಸುಗಮ ಸಂಚಾರ ಕಷ್ಟವಿತ್ತು. ಇದೀಗ ಮಳೆ ಮುಗಿದ ಬಳಿಕ ಸಣ್ಣ ಹೊಂಡಗಳೆಲ್ಲಾ ಗಾತ್ರ ಹಿಗ್ಗಿಸಿಕೊಂಡು ದೊಡ್ಡದಾಗಿವೆ. ರಸ್ತೆಗೆ ಹಾಕಿರುವ ಡಾಂಬರು ಕೊಚ್ಚಿ ಹೋಗಿ ವಾಹನಗಳು ಸಂಚರಿಸುವಾಗ ಕುಣಿದುಕೊಂಡು ಹೋದಂತೆ ಕಾಣುತ್ತದೆ. ಹೊಂಡಗಳಿಗೆ ಸುತ್ತುಬಳಸಿ, ಪ್ರದಕ್ಷಿಣೆ ಹಾಕಿಕೊಂಡು ಹೋಗುವ ಸಂದರ್ಭ ಗಮ್ಯ ಸ್ಥಳವನ್ನು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಒಮ್ಮೆ ಈ ರಸ್ತೆ ಮೂಲಕ ಹೋದ ಪ್ರಯಾಣಿಕ ಮತ್ತೊಮ್ಮೆ ಹೋಗಲು ಪರ್ಯಾಯ ರಸ್ತೆಯನ್ನು ಹುಡುಕುವಂತಾಗಿದೆ. ಆದರೆ ದಿನನಿತ್ಯ ಸಂಚರಿಸುವ ಪ್ರಯಾಣಿಕರು, ಶಾಲೆ ಮಕ್ಕಳಿಗೆ ಈ ಸಮಸ್ಯೆಯಿಂದ ಪರಿಹಾರ ಸಿಗಬೇಕಾದರೆ ಮರು ಡಾಂಬರೀಕರಣವಾಗಬೇಕು. ವಿಮಾನ ನಿಲ್ದಾಣಕ್ಕೆ ಹತ್ತಿರದ ದಾರಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕು ಸೇರಿದಂತೆ ಈ ಭಾಗದಿಂದ ಬರುವ ಹೊರ ಜಿಲ್ಲೆಯ ಜನರಿಗೂ ಪೊಳಲಿ, ಕಟೀಲು ದೇವಸ್ಥಾನಕ್ಕೆ, ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಇರುವ ಹತ್ತಿರದ ದಾರಿ. ಆದರೆ ನಿರ್ವಹಣೆಯ ಕೊರತೆಯಿಂದ ರಸ್ತೆ ಹೊಂಡಮಯವಾಗಿದೆ. ಬಿ.ಸಿ.ರೋಡಿನಿಂದ-ಪೊಳಲಿಗೆ ಕೇವಲ 13 ಕಿ.ಮೀ ದೂರ ಇದ್ದರೂ ರಸ್ತೆ ದುರವಸ್ಥೆಯಿಂದಾಗಿ ಕ್ರಮಿಸುವುದೇ ಸಾಹಸವಾಗಿದೆ. ನಿತ್ಯ ಈ ರಸ್ತೆಯ ಮೂಲಕ ಹೋಗುವ ವಾಹನಗಳು ವಾರಕ್ಕೊಮ್ಮೆ ಗ್ಯಾರೇಜನ್ನು ಹೋಗಬೇಕಾಗುತ್ತದೆ.

ಬಿ.ಸಿ.ರೋಡ್-ಪೊಳಲಿ ರಸ್ತೆ ನಿರ್ವಹಣೆ ಇಲ್ಲದೇ ಸೊರಗಿ ಹೋಗಿದೆ. ರಸ್ತೆಯುದ್ದಕ್ಕೂ ಹೊಂಡಗಳು ತುಂಬಿವೆ. ರಸ್ತೆ ಅಗಲವಾಗಿದ್ದರೂ ವಾಹನ ಸವಾರರಿಗೆ ಸುಗಮ ಸಂಚಾರ ಮರೀಚಿಕೆಯಾಗಿದೆ. ಮೊಡಂಕಾಪು ರೆಲ್ವೇ ಬ್ರಿಡ್ಜ್ ಬಳಿ ರಸ್ತೆಯಲ್ಲಿರುವ ಹೊಂಡ ಹಲವಾರು ತಿಂಗಳಿನಿಂದ ಇದ್ದರೂ ಯಾರೂ ಇತ್ತ ಕಡೆ ತಲೆ ಹಾಕಿಲ್ಲ. ಕಿಶೋರ್ ಬಂಗೇರ ಏರ್ಯ, ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net