ನ.15ರಿಂದ ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ; ಕಾಡುಮಲ್ಲೇಶ್ವರ ಗೆಳೆಯರ ಬಳಗ ಆಯೋಜನೆ

kadle
Published on

ಬೆಂಗಳೂರು: ಭ್ರಮರಾಂಭ ಸಮೇತ ಶ್ರೀಕಾಡುಮಲ್ಲೇಶ್ವರ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗದ ಜಂಟಿ ಸಹಯೋಗದಲ್ಲಿ ನ.15 ರಿಂದ 18ರವರೆಗೆ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸಂವರ್ಧನೆಗಾಗಿ 2010ರಲ್ಲಿ ಆರಂಭಿಸಿದ್ದ ಹುಣ್ಣಿಮೆ ಹಾಡು ಕಾರ್ಯಕ್ರಮದ 200ನೇ ಸಂಚಿಕೆ ಆಚರಿಸಲಾಗುವುದು ಎಂದು ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ 8ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಡಲೆಕಾಯಿ ಪರಿಷೆ ಬಸವನಗುಡಿ ಕಡಲೆಕಾಯಿ ಪರಿಷೆಯಂತೆ ಪ್ರಸಿದ್ದಿ ಪಡೆದಿದೆ. ನಾಲ್ಕು ದಿನಗಳ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣದಿಂದ ರೈತರು ಕಡಲೆಕಾಯಿ ತಂದು ಮಾರಾಟ ಮಾಡಲಿದ್ದಾರೆ. ರೈತರು, ಬೀದಿ ಬದಿಯ ವ್ಯಾಪಾರಿಗಳಿಗೆ 400ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಪರಿಸರ ಸ್ನೇಹಿ ಪರಿಷೆೆಗೆ ಆದ್ಯತೆ ನೀಡುವ ಉದ್ದೇಶದಿಂದ ಪ್ಲಾಸ್ಟಿಕ್ ಮುಕ್ತ ಬಟ್ಟೆ ಚೀಲ, ಪೇಪರ್ ಕವರ್ ಬಳಸಲು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಕಡಲೆಕಾಯಿ ಪರಿಷೆಯಲ್ಲಿ 8ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಸೂಕ್ತ ರಕ್ಷಣಾ ವ್ಯವಸ್ಥೆಗೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಜೊತೆಗೆ ನೂರಾರು ಸ್ವಯಂ ಸೇವಕರು ಕೂಡ ಕಾರ್ಯನಿರ್ವಹಿಸಲಿದ್ದಾರೆ ಎಂದು ಶಿವರಾಂ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅನೂಪ್ ಅಯ್ಯಂಗಾರ್, ಚಂದ್ರಶೇಖರ್ ನಾಯ್ಡು, ಶ್ರೀವಲ್ಲಭ, ಚಂದ್ರಮೌಳಿ, ಎಲ್.ಎನ್.ಪ್ರಭು, ರಾಜಶಶಿಧರ್, ಡಾ.ಲೀಲಾ ಸಂಪಿಗೆ, ಉಪಸ್ಥಿತರಿದ್ದರು.

ನಾಲ್ಕು ದಿನ ನಡೆಯುವ ಕಡ್ಲೆಕಾಯಿ ಪರಿಷೆ

ನ.15 ರಂದು ಸಂಜೆ 4.30ಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಪರಿಷೆ ಉದ್ಘಾಟನೆ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಇನ್ನಿತರರು ಭಾಗವಹಿಸಲಿದ್ದಾರೆ.ಪ್ರತಿದಿನ ಸಂಜೆ 6.30ರಿಂದ ಹುಣ್ಣಿಮೆ ಹಾಡು ಕಾರ್ಯಕ್ರಮ ನಡೆಯಲಿದೆ. ಪಂಡಿತ್ ರವೀಂದ್ರ ಸೊರಗಾಂವಿ,ವಿದ್ವಾನ್ ಸಾಯಿತೇಜಸ್ ಚಂದ್ರಶೇಖರ್, ಹಂಸಲೇಖ, ಮಧು ಮನೋಹರ್, ಉಸ್ತಾದ್ ಫಯಾಜ್‌ಖಾನ್ ಮತ್ತಿತರ ಖ್ಯಾತನಾಮರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net