ಬಸವಣ್ಣನಿಗೆ ಕಡಲೆಕಾಯಿ ತಲಾಭಾರ ಮಾಡುವ ಮೂಲಕ ಪರಿಷೆಗೆ ಚಾಲನೆ

Sudhee_11_Groundnut_Parishe_Inaug_@_Bull_Temple (3)
Published on

ಬೆಂಗಳೂರು: ಬಸವನಗುಡಿಯಲ್ಲಿ ಆರಂಭವಾಗಿರುವ ಪಾರಂಪರಿಕ ಕಡಲೆಕಾಯಿ ಪರಿಷೆಗೆ ಸೋಮವಾರ ಅದ್ದೂರಿ ಚಾಲನೆ ದೊರೆತಿದ್ದು, ದೊಡ್ಡಬಸವಣ್ಣ ದೇವಾಲಯದ ಎದುರು ಕಂಚಿನ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಪರಿಷೆ ಉದ್ಘಾಟನೆಗೊಂಡಿತು.

ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಉದಯ ಗರುಡಾಚಾರ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಮುಜರಾಯಿ ಇಲಾಖೆ, ಪಾಲಿಕೆ ಅಧಿಕಾರಿಗಳು ಪಾಲ್ಗೊಂಡು ಬಸಣ್ಣನಿಗೆ ಕಡಲೆಕಾಯಿಯಿಂದ ತುಲಾಭಾರ ಮಾಡಿದರು. ನಂತರ ನೆರೆದಿದ್ದ ನೂರಾರು ಭಕ್ತರಿಗೆ ಕಡಲೆಕಾಯಿಯನ್ನು ಪ್ರಸಾದವಾಗಿ ವಿತರಿಸಿದರು.

ಪರಿಷೆ ಅಂಗವಾಗಿ ದೊಡ್ಡ ಗಣಪನಿಗೆ ಕಡಲೆಕಾಯಿ ಅಭಿಷೇಕ ಮಾಡಿ 75 ಕೆ.ಜಿ. ಬೆಣ್ಣೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಅದೇ ರೀತಿ ದೊಡ್ಡ ಬಸವಣ್ಣನಿಗೆ ನೂರು ಸೇರು ಕಡಲೆಕಾಯಿಯಿಂದ ಅಭಿಷೇಕ ಮಾಡಲಾಯಿತು. ಕಡೆಯ ಕಾರ್ತೀಕ ಸೋಮವಾರ ಹಾಗೂ ಕಡಲೆಕಾಯಿ ಪರಿಷೆ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಸರದಿಯಲ್ಲಿ ನಿಂತು ದೊಡ್ಡ ಬಸವಣ್ಣ ಹಾಗೂ ದೊಡ್ಡ ಗಣಪತಿ ದೇವರ ದರ್ಶನ ಪಡೆದರು.

ಜಾತ್ರೆಯ ವಾತಾವರಣ:ನಂತರ ರಸ್ತೆಯ ಇಕ್ಕೆಲಗಳಲ್ಲಿ ಮಾರಾಟವಾಗುತ್ತಿದ್ದ ಕಡಲೆಕಾಯಿ ರುಚಿ ನೋಡಿ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ತಿಂಡಿ, ಆಟಿಕೆಗಳತ್ತ ಮಕ್ಕಳು, ಯುವಜನರು ಆಕರ್ಷಿತರಾಗಿದ್ದರೆ, ಅಲಂಕಾರಿ ಹಾಗೂ ಗೃಹಬಳಕೆ ವಸ್ತುಗಳತ್ತ ಮಹಿಳೆಯರ ನೋಟ, ಚೌಕಾಸಿ ವ್ಯಾಪಾರ ಸಾಗಿತ್ತು. ಮತ್ತೊಂದೆಡೆ ಆಕಾಶ ಬುಟ್ಟಿ, ಟೋರಾ ಟೋರಾ, ಕುದುರೆ ಮತ್ತು ತೊಟ್ಟಿಲುಗಳ ರಾಟೆಗಳಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಹಿರಿಯರೂ ಆಡಿ ಆನಂದಿಸಿದರು. ಒಟ್ಟಾರೆ ಗ್ರಾಮೀಣ ಸೊಡಗಿನ ಈ ಪರಿಷೆ ಬಸವನಗುಡಿಯಲ್ಲಿ ಜಾತ್ರೆಯ ವಾತಾವರಣ ನಿರ್ಮಿಸಿತ್ತು.

ಪರಿಷೆಯ ಆಕರ್ಷಣೆ: ರಾಮಕೃಷ್ಣ ಆಶ್ರಮದಿಂದ ಗೋಕುಲ ಇನ್‌ಸ್ಟಿಟ್ಯೂಟ್ ವರೆಗೆ, ಇತ್ತ ಬಿಎಂಎಸ್ ಮಹಿಳಾ ಕಾಲೇಜು ವತಿಯಿಂದ ಗಾಂಧೀ ಬಜಾರ್‌ಕಡೆಗೆ, ಅತ್ತ ಹನುಮಂತನಗರ ಮುಖ್ಯ ರಸ್ತೆ ಕಡೆಗೆ ಸುತ್ತಲೂ 1.5 ಕಿ.ಮೀ.ನಷ್ಟು ರಸ್ತೆಯ ಇಕ್ಕೆಲಗಳಲ್ಲಿ ಕಡಲೆಕಾಯಿ, ಆಟಿಕೆ ಸೇರಿದಂತೆ ನಾನಾ ವಸ್ತುಗಳ ವ್ಯಾಪಾರಕ್ಕೆಂದು ಮೂರು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಕಣ್ಮನ ಸೆಳೆವ ಬಳೆ, ಸರ ಸೇರಿದಂತೆ ಕೃತಕ ಆಭರಣಗಳು, ಗೃಹಾಲಂಕಾರ ಹಾಗೂ ಅಡಿಗೆ ಮನೆ ಬಳಕೆ ವಸ್ತುಗಳು, ಶಿಲ್ಪಕಲಾಕೃತಿಗಳು, ಮಂಡಕ್ಕಿ, ಕಾರ, ಬೆಂಡು, ಬತಾಸು ಸೇರಿದಂತೆ ಇತರೆ ಖರಿದ ತಿನಿಸುಗಳ ಮಾರಾಟ ಜೋರಾಗಿ ಸಾಗಿತ್ತು.

ಬೆಲ್ಲದ ಪರಿಷೆಯ ಆಕರ್ಷಣೆ: ಆರೋಗ್ಯಕರ ಮತ್ತು ರುಚಿಕರವಾದ ಬೆಲ್ಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಡಲೆಕಾಯಿ ಪರಿಷೆಯಲ್ಲಿ ಮಂಡ್ಯ ಕೃಷಿ ಇಲಾಖೆಯು ಶುದ್ಧ ಬೆಲ್ಲ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಶೀರ್ಷಿಕೆಯಡಿ ‘ಬೆಲ್ಲದ ಪರಿಷೆ’ ಆಯೋಜಿಸಿದೆ. ರೋಲ್ ಬೆಲ್ಲ, ಗುಂಡು ಬೆಲ್ಲ, ಬಕೆಟ್ ಬೆಲ್ಲ, ಅಚ್ಚು ಬೆಲ್ಲ ಹೀಗೆ ತರಹೇವಾರಿ ಬೆಲ್ಲದುಂಡೆಗಳಿಂದ ಗೋಲಾಕಾರ, ಗೋಪುರ, ಗಾಣದ ಮನೆ, ಗಣಪತಿ ವಿಗ್ರಹ, ದೀಪಗಳು ಮತ್ತಿತರ ವಿನ್ಯಾಸಗಳು ಪರಿಷೆಯ ಆಕರ್ಷಣೆಯಾಗಿದೆ.

ಬಿಸಿಯಾದ ಕಡಲೆಕಾಯಿ: ಪರಿಷೆಗೆ ಬೆಂಗಳೂರು ಸುತ್ತಮುತ್ತಲ ಹಳ್ಳಿಗಳು, ತುಮಕೂರು, ರಾಮನಗರ, ಚನ್ನಪಟ್ಟಣ, ಕೋಲಾರ, ಚಿಂತಾಮಣಿ, ಹೊಸೂರು ಸೇರಿದಂತೆ ದೂರದ ಬಿಜಾಪುರದಿಂದಲೂ ರೈತರು, ವ್ಯಾಪಾರಿಗಳು ಕಡಲೆಕಾಯಿ ಮಾರಾಟಕ್ಕೆ ಆಗಮಿಸಿದ್ದಾರೆ. ಆದರೆ ಈ ಬಾರಿ ಮಳೆಯ ಕೊರತೆಯಿಂದ ಕೆಲವೆಡೆ ಬೆಳೆ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಮೂಟೆಗೆ 4 ಸಾವಿರ ಇದ್ದ ಕಡಲೆಕಾಯಿ ಈ ಬಾರಿ 6-7 ಸಾವಿರ ರೂ.ಗೆ ಏರಿಕೆಯಾಗಿದೆ. ಕಾಯಿಯ ಘಾತ್ರಕ್ಕೆ ಅನುಗುಣವಾಗಿ ಲೀಟರ್‌ಗೆ 50-60 ರೂ.ವರೆಗೆ ಮಾರಾಟವಾಗುತ್ತಿದೆ. ಇನ್ನು ಪರಿಷೆಗೆ ಆಗಮಿಸಿದ್ದ ಮಂದಿ ಹಸಿ, ಸಿಪ್ಪೆ ಸಹಿತ ಬೇಯಿಸಿದ,ಹುರಿದ ಹಾಗೂ ಸಿಪ್ಪೆ ರಹಿತ ಬೇಯಿಸಿದ ಕಡಲೆಬೀಜಕ್ಕೆ ಮಸಾಲೆ ಹಾಕಿದ ಕಡಲೆಬೀಜ ಸೇರಿ ತರಹೆವಾರಿ ಕಡಲೆಕಾಯಿ ಸವಿಯುತ್ತಿದ್ದರೆ, ಮತ್ತೊಂದೆಡೆ ಮನೆಗೂ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತೆಪ್ಪೋತ್ಸವದ ಮೆರುಗು: ಕೆಂಪಾಂಬುಧಿ ಕೆರೆಯಲ್ಲಿ ಆಯೋಜಿಸಿದ್ದ ತೆಪ್ಪೋತ್ಸವಕ್ಕೆ ಶಾಸಕ ಎಲ್. ರವಿಸುಬ್ರಹ್ಮಣ್ಯ ಸೋಮವಾರ ಸಂಜೆ ಚಾಲನೆ ನೀಡಿದರು. ಈ ವೇಳೆ ನಂದಿಯನ್ನು ಹೂಗಳಿಂದ ಅಲಂಕೃತಗೊಂಡಿದ್ದ ತೆಪ್ಪದಲ್ಲಿ ಇರಿಸಿ ಪೂಜೆ ಸಲ್ಲಿಸಿ ತೆಪ್ಪೋತ್ಸವ ನಡೆಸಲಾಯಿತು. ಹಿಂದಿನ ಸಾಂಪ್ರದಾಯಿಕ ಆಚರಣೆಯಂತೆ ತೆಪ್ಪೋತ್ಸವ ನಡೆಸಲಾಯಿತು. ಜತೆಗೆ ಬ್ಯೂಗಲ್ ರಾಕ್ ಉದ್ಯಾನದಲ್ಲಿ ಹಾಗೂ ನರಸಿಂಹಸ್ವಾಮಿ ಉದ್ಯಾನದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net