

ಕಡಬ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗಿರಥಿ ಮುರುಳ್ಯ ಮಾತನಾಡಿ, ಶಾಲೆ ಅಂಗನವಾಡಿ, ಸರ್ಕಾರಿ ಕಚೇರಿಗಳ ಬಳಿ ಅಪಾಯಕಾರಿ ಮರಗಳಿದ್ದರೆ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು. ಕಾನೂನು ಸಮಸ್ಯೆಗಳಿದ್ದರೆ ಪರಿಹರಿಸಿಕೊಂಡು ಅಪಾಯವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದರು.
ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಅಲ್ಲಿ ಹಿಂದೆ ಸೇವೆ ಮಾಡಿರುವವರನ್ನು ಪರಿಗಣಿಸಿ ಅವರಿಗೆ ನ್ಯಾಯ ಒದಗಿಸಬೇಕು. ಅನಾರೋಗ್ಯ ಪೀಡಿತರಾಗಿರುವ ದೋಳ್ಪಾಡಿ ಶಾಲಾ ಮುಖ್ಯ ಶಿಕ್ಷಕರನ್ನು ಶಿಕ್ಷಣ ಇಲಾಖೆ ಕಚೇರಿಗೆ ನಿಯೋಜನೆ ಮಾಡಿ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಸಕರು ಸೂಚಿಸಿದರು.
ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಕಡಬ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ಕುಮಾರ್ ಭಂಡಾರಿ ಪ್ರಕೃತಿ ವಿಕೋಪದ ಮುಂಜಾಗ್ರತೆ, ಪರಿಹಾರದ ಬಗ್ಗೆ ಸೂಚನೆ ನೀಡಿದರು. ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳ ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಭುವನೇಂದ್ರ ಕುಮಾರ್ ಹಾಗೂ ತಾಲೂಕು ಆಡಳಿತ ಕಚೇರಿಯ ಕೌಶಿಕ್ ಕುಳ ನಿರೂಪಿಸಿದರು.
ಅಧಿಕಾರಿಗಳನ್ನೇ ಗುರಿಯಾಗಿಸಿ ಶಿಸ್ತುಕ್ರಮ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಕೆಲವು ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದಾಗ ಗರಂ ಆದ ಶಾಸಕರು, ಒಂದು ವೇಳೆ ಯಾವುದಾದರೂ ಗ್ರಾಮದಿಂದ ಸಮಸ್ಯೆ ಇದೆ ಎಂದು ದೂರವಾಣಿ ಕರೆ ಬಂದರೆ ಅಲ್ಲಿನ ಅಧಿಕಾರಿಗಳನ್ನೇ ಗುರಿಯಾಗಿಸಿ ಶಿಸ್ತುಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.