

ಚಿಂತಾಮಣಿ: ದೇಶ ಕಂಡ ಸಂತರಲ್ಲಿ ಕಬೀರರ ಸ್ಥಾನ ಮಹತ್ವಪೂರ್ಣವಾದುದು. ಜಾತಿ ಧರ್ಮಗಳನ್ನು ಮೀರಿ ಸತ್ಯದ ಸಾಕ್ಷಾತ್ಕಾರ ಮಾಡಿಕೊಂಡವರು ಎಂದು ಪದ್ಮಶ್ರೀ ಪ್ರಹ್ಲಾದ್ ಸಿಂಗ್ ತಿಪಾನಿಯಾ ಬಣ್ಣಿಸಿದರು.
ತಾಲೂಕಿನ ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂತ ಕಬೀರ್‌ರ ದೋಹೆಗಳ ಗಾಯನ ಮತ್ತು ವ್ಯಾಖ್ಯಾನ ಮಾಡಿದರು.
ಸಂತ ಕಬೀರರು ಸಮಾಜದ ಎಲ್ಲ ಧರ್ಮಗಳ ಸಾರವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದರು. ಮಾನವರಲ್ಲಿ ಪರಸ್ಪರ ಪ್ರೀತಿ, ದಯೆ ಮತ್ತು ಸಹಾಯದ ಮೂಲಕ ದೇವರನ್ನು ತಲುಪಬಹುದೆಂದು ಬೋಧಿಸಿದರು. ಅವರ ಸರಳವಾದ ಬೋಧನೆಗಳು ಜನರ ಬದುಕಿಗೆ ಹತ್ತಿರವಾಗಿವೆ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಕಬೀರರ ಉಪದೇಶಗಳು ಪ್ರಭಾವಕಾರಿಯಾಗಿದೆ. ಸತ್ಯ ಮತ್ತು ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಹಾಗೂ ದುರಾಸೆ ಜೀವನದಿಂದ ಮುಕ್ತರಾಗಿ ಸರಳ ಜೀವನ ನಡೆಸುವಂತೆ ಕಬೀರರು ತಿಳಿಸಿದ್ದಾರೆ ಎಂದರು.
ಸತ್ಯ ಅರಿಯುವ ಕಾಯಕ
ಸುಮಾರು 50 ವರ್ಷಗಳಿಂದ ಸಂತ ಕಬೀರರ ಭಜನ್, ದೋಹೆಗಳನ್ನು ಹಾಡುತ್ತಾ ಪ್ರಪಂಚದಾದ್ಯಂತ ಸುತ್ತಾಡಿದ್ದೇನೆ. ಜೀವನವನ್ನು ಇದಕ್ಕೆಂದೇ ಮುಡುಪಾಗಿಟ್ಟಿದ್ದೇನೆ. ಸತ್ಯವನ್ನು ಅರಿಯುವ ಕಾಯಕವನ್ನು ಜೀವನದುದ್ದಕ್ಕೂ ಮುಂದುವರಿಸುತ್ತೇನೆ ಎಂದು ಪ್ರಹ್ಲಾದ್‌ಸಿಂಗ್ ತಿಪಾನಿಯಾ ಹೇಳಿದರು. ದೇವನಾರಾಯಣ್ ಸರೋಲಿಯಾ, ಅಜಯ್ ತಿಪಾನಿಯಾ, ಧರ್ಮೇಂದ್ರ ತಿಪಾನಿಯಾ, ಪ್ರಿಯಾಲ್ ಮಹೇಶ್ವರಿ, ಲಲಿತಾ ಅವರು ಗಾಯನದಲ್ಲಿ ಸಹಕರಿಸಿದರು. ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅವರು ಕಲಾವಿದರನ್ನು ಸನ್ಮಾನಿಸಿದರು. ವಾನರಾಶಿ ಬಾಲಕೃಷ್ಣ ಭಾಗವತರ್, ಭಕ್ತರು ಭಾಗವಹಿಸಿದ್ದರು.