

ಕನಕಪುರ : ತಾಲೂಕಿನ ಆರಾಧ್ಯ ದೈವ ಕಬ್ಬಾಳಮ್ಮ ದೇವಿಯ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ಸಾತನೂರು ಹೋಬಳಿ ಕಬ್ಬಾಳು ಗ್ರಾಮದಲ್ಲಿ ನೆಲಸಿರುವ ಶಕ್ತಿ ದೇವತೆ ಕಬ್ಬಾಳಮ್ಮನ ಜಾತ್ರೆ, ರಥೋತ್ಸವ ಅಗ್ನಿಕೊಂಡೋತ್ಸವ ಹಾಗೂ ಸಿಡಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಸೋಮವಾರ ಬೆಳಗ್ಗೆ ಅಗ್ನಿಕೊಂಡೋತ್ಸವ ಹಾಗೂ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನೆರವೇರಿತು.
ಅಪಾರ ಭಕ್ತರು ಹೂವು, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮಂಗಳವಾರ ಬೆಳೆಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ ಅಲಂಕಾರ ನೆರವೇರಿಸಲಾಗಿತ್ತು. ಬೆಳಗಿನ ಸಮಯದಲ್ಲಿ ಸುಮಂಗಲಿಯರು ಕಳಸ ಹೊತ್ತು, ತಂಬಿಟ್ಟಿನ ಆರತಿಯೊಂದಿಗೆ ಗಂಗೆ ಪೂಜೆ ಸಲ್ಲಿಸಿ ಪೂಜಾ ವಿಧಿಗಳನ್ನು ನೆರವೇರಿತು. ಬೆಂಗಳೂರು ನಗರ ಸೇರಿ ಜಿಲ್ಲೆಯ ಬಹುತೇಕ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ದೇವಿಯ ದರ್ಶನ ಪಡೆದರು. ದೇವಾಲಯದ ಆಡಳಿತ ಮಂಡಳಿ ಸಿ.ಇ.ಒ ಲಕ್ಷ್ಮಿನಾರಾಯಣ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಜೆಡಿಎಸ್ ಮುಖಂಡ ಕಬ್ಬಾಳೆಗೌಡ ಮತ್ತಿತರರು ಹಾಜರಿದ್ದರು.