ಕಬಡ್ಡಿಯಲ್ಲಿ ಶಿವಮೊಗ್ಗಕ್ಕೆ ಜಯ

CTD KABADDI
Published on

ಚಿತ್ರದುರ್ಗ: ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಹೊನಲು-ಬೆಳಕಿನ ಪುರುಷರ ಕಬಡ್ಡಿಯಲ್ಲಿ ಶಿವಮೊಗ್ಗದ ಸಿಬಿಆರ್ ಕಾನೂನು ಕಾಲೇಜು ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.

ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದ ಕಬಡ್ಡಿ ಅಂಗಳದಲ್ಲಿ ಶನಿವಾರ ನಡೆದ ಟೂರ್ನಿಯಲ್ಲಿ ಹುಬ್ಬಳ್ಳಿಯ ಜಿಕೆ ಕಾನೂನು ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಚಿತ್ರದುರ್ಗದ ಸರಸ್ವತಿ ಕಾನೂನು ಮಹಾವಿದ್ಯಾಲಯ, ಹುಬ್ಬಳ್ಳಿಯ ರಾಜ್ಯ ಕಾನೂನು ವಿವಿಯಿಂದ ಎರಡು ದಿನ ನಡೆದ ಪಂದ್ಯಾವಳಿಯ ಕೊನೆಘಟ್ಟದಲ್ಲಿ ಫೈನಲ್ ಪ್ರವೇಶಿಸಿದ ಶಿವಮೊಗ್ಗ-ಹುಬ್ಬಳ್ಳಿ ತಂಡಗಳ ನಡುವೆ ಆರಂಭದಿಂದಲೂ ಗೆಲುವಿಗಾಗಿ ಸೆಣಸಾಟ ನಡೆಯಿತು.

ಕಬಡ್ಡಿ ಕ್ರೀಡಾಪಟುಗಳಿಂದ ಉತ್ತಮ ಆಟ ಪ್ರದರ್ಶನವಾದಾಗ ಪ್ರೇಕ್ಷಕರ ಗ್ಯಾಲರಿಯಿಂದ ಕರತಾಡನ ವ್ಯಕ್ತವಾಯಿತು.

ಕ್ರಮವಾಗಿ 44-32 ಅಂಕದೊಂದಿಗೆ 12 ಪಾಯಿಂಟ್ಸ್ ಅಂತರದಿಂದ ಶಿವಮೊಗ್ಗಕ್ಕೆ ವಿಜಯಲಕ್ಷ್ಮಿ ಒಲಿಯಿತು.

ಚಿಕ್ಕೋಡಿ ಕೆಎಲ್ಇ ಕಾನೂನು ಕಾಲೇಜು ತಂಡ ತೃತೀಯ, ಕೋಲಾರ ಸರ್ಕಾರಿ ಕಾನೂನು ಕಾಲೇಜು ನಾಲ್ಕನೇ ಸ್ಥಾನ ಪಡೆದುಕೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net