ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ವಿರುದ್ಧ ಕೆ.ಉಮಾಶಂಕರ್ ಆರೋಪ

madi
Published on

ಬೆಂಗಳೂರು: ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮೇಲೆ ದುರಾಡಳಿತ, ಮಹಿಳಾ ನಿಂದಕ, ಸ್ವಜನ ಪಕ್ಷಪಾತದ ಆರೋಪ ಕೇಳಿ ಬಂದಿದೆ.

ಪ್ರೆಸ್ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಉಮಾಶಂಕರ್ ರಾಜ್ಯಾಧ್ಯಕ್ಷರ ಸ್ವಜನ ಪಕ್ಷಪಾತ, ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯ ಸಂಘದ ನಿಯಮಗಳನ್ನು ಗಾಳಿಗೆ ತೂರಿ, ಸಮಾಜದ ಕುಲಗುರುಗಳನ್ನು ಕಾರ್ಯಕ್ರಮಗಳಿಗೆ ಬಾರದಂತೆ ತಡೆದಿರುವುದರ ಜೊತೆಗೆ ಸಮಾಜದ ಗಣ್ಯವ್ಯಕ್ತಿಗಳು ಕರಂಜೆ ಮಠಕ್ಕೆ ನೀಡಿರುವ ದೇಣಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಯಾವುದೇ ಸಾಮಾಜಿಕ ಸಂಘಟನೆಗಳಿದ್ದರೂ ಅಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಿಗೆ ಹೆಚ್ಚಿನ ಅಧಿಕಾರವಿರುತ್ತದೆ. ಆದರೆ ಮಡಿವಾಳರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಯ ಅಧಿಕಾರವನ್ನು ಕಸಿದುಕೊಂಡು ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸಮಾಜ ಸಂಘಟನೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಅವಮಾನಿಸುವಂತೆ ಮಾತನಾಡುತ್ತಾರೆ. ಕುಲಗುರುಗಳನ್ನ, ಸಮಾಜದ ಗಣ್ಯರನ್ನ, ಸಂಘದ ಇತರೆ ಪದಾಧಿಕಾರಿಗಳನ್ನು ಯಾವುದೇ ಕಾರ್ಯಕ್ರಮಗಳಿಗೆ ಕರೆಯದೆ ಕೇವಲ ತಮ್ಮ ಮಾತಿಗೆ ಚಪ್ಪಾಳೆ ಹೊಡೆಯುವವರನ್ನಷ್ಟೆ ಕರೆದು ಕಾರ್ಯಕ್ರಮ ನಡೆಸುತ್ತಿದ್ದಾರೆ.

ಸರ್ಕಾರ ಮಟ್ಟದಲ್ಲಿ ಮೀಸಲಾತಿಗಾಗಿ ಹೋರಾಡುವಂತೆ ಬಿಂಬಿಸಿಕೊಳ್ಳುವ ನಂಜಪ್ಪ ಸಂಘದ ಬೈಲಾದೊಳಗೆ ಮಡಿಕಟ್ಟೆ ಬಂಧುಗಳನ್ನು ಹೊರಗಿಟ್ಟು, ತಾರತಮ್ಯ ಎಸಗಿದ್ದಾರೆ. ಕೇವಲ ತೋರ್ಪಡಿಕೆಗೋಸ್ಕರ ಮಡಿಕಟ್ಟೆ ಬಂಧುಗಳನ್ನು ಸಭೆ-ಸಮಾರಂಭಗಳಿಗೆ ಕರೆದು, ಮಡಿಕಟ್ಟೆ ಬಂಧುಗಳು ಕೂಡ ನನ್ನ ಪರವಾಗಿ ಇದ್ದಾರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಮಡಿಕಟ್ಟೆ ಮುಖಂಡರಿಗೆ ಕಳೆದ ಎರಡು ವರ್ಷದಿಂದಲೂ ನಡೆಯುತ್ತಿರುವ ಈ ತಾರತಮ್ಯ ಗಮನಕ್ಕೆ ಬಾರದಿರುವುದು ವಿಪರ್ಯಾಸ. ತಮ್ಮ ವಿರುದ್ಧ ಧ್ವನಿ ಎತ್ತುವ ಜಿಲ್ಲಾ ಅಧ್ಯಕ್ಷರನ್ನು ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಒಂದು ಜಿಲ್ಲೆಯಲ್ಲಿ ಎರಡು ಸಂಘಗಳಾಗುವಂತೆ ಮಾಡುತ್ತಿದ್ದಾರೆ ಎಂದು ಉಮಾಶಂಕರ್ ಆರೋಪಿಸಿದರು.

ಸಮಾಜ ಬಂಧುಗಳು ಇವರ ದುರ್ನಡತೆ ಬಗ್ಗೆ ಎಚ್ಚರವಹಿಸಬೇಕೆಂಬ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸಿದ್ದು, ಸಂಘದ ವಿರುದ್ಧವಾಗಲಿ, ಸಮುದಾಯದ ವಿರುದ್ಧವಾಗಲಿ ನಮ್ಮ ಹೋರಾಟವಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ವಿವಿಧ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net