

ಬೆಂಗಳೂರು: ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಅಗತ್ಯ ಸಂಸ್ಕಾರ ನೀಡಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಸಾಹಿತಿ ಪ್ರೊ. ಕೆ.ಪಿ.ಪುತ್ತೂರಾಯರು ಹೇಳಿದ್ದಾರೆ.
ಸಾಹಿತ್ಯ ಪ್ರಕಾಶನ ಸಂಸ್ಥೆಯ ಸುಬ್ಬು ಪ್ರಕಾಶನ ಪ್ರಕಟಿಸಿರುವ 10 ವರ್ಷದ ಬಾಲಕಿ ಪರಿಣಿತ ಬರೆದಿರುವ ‘ಟೇಲ್ಸ್ ಬೈ ಪರಿ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಕೇವಲ ಮಕ್ಕಳ ಅಗತ್ಯವನ್ನು ಪೂರೈಸಿದರೆ ಉತ್ತಮ ಪೋಷಕರೆನಿಸಿಕೊಳ್ಳುವುದಿಲ್ಲ. ಬದಲಾಗಿ ಮಕ್ಕಳಿಗೆ ಮೌಲ್ಯಯುತ ಜೀವನ, ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಸಬೇಕು. ಉತ್ತಮ ಮಕ್ಕಳೇ ನಿಜವಾದ ಆಸ್ತಿ. ಆ ನಿಟ್ಟಿನಲ್ಲಿ ಕುಮಾರಿ ಪರಿಣಿತ ಪೋಷಕರ ಸಂಸ್ಕಾರ ಗಮನಾರ್ಹ. ಕೇವಲ 6 ವರ್ಷದಲ್ಲೇ ಕತೆಗಳನ್ನು ಬರೆಯಲು ಆರಂಭಿಸಿದ ಪರಿಣಿತ ಸತತ ನಾಲ್ಕು ವರ್ಷಗಳಿಂದ ಬರೆದಿರುವ ಕತೆಗಳಲ್ಲಿ ಉತ್ತಮ ನೈತಿಕ ಮೌಲ್ಯವಿದೆ. ‘ಥ್ಯಾಂಕ್ ಗಾಡ್’ ‘ಸ್ಮಾರ್ಟ್ ಮಿನಿಸ್ಟರ್’ ಕತೆಗಳಲ್ಲಿ ನೈತಿಕ ಸಂದೇಶಗಳಿವೆ. ಮುಂದೆ ಉತ್ತಮ ಬರಹಗಾರ್ತಿಯಾಗುವ ಎಲ್ಲ ಲಕ್ಷಣಗಳು ಬಾಲಕಿಯ ಬರಹದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ಲೇಖಕಿ ಪರಿಣಿತ, ಪೋಷಕರಾದ ಬಾಲಾಜಿ, ಡಾ.ಅನುಷಾ ಮತ್ತಿತರರು ಪಾಲ್ಗೊಂಡಿದ್ದರು.
"ಬುದ್ದಿ ಹೇಳಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಸಮಾಜಕ್ಕೆ ಬುದ್ದಿ ಹೇಳುವ ಬರಹ ನೀಡಿರುವ ಪರಿಣಿತ ಪ್ರಯತ್ನ ಇತರರಿಗೆ ಸ್ಪೂರ್ತಿ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು ಮಾಡಬೇಕು." -ಆರ್.ಪಿ.ರವಿಶಂಕರ್, ಆರ್ಯ ವೈಶ್ಯ ಮಹಾಸಭಾ ಅಧ್ಯಕ್ಷ
"ಚಿಕ್ಕಂದಿನಿಂದ ನಮ್ಮ ತಂದೆ, ತಾಯಿ ನನಗೆ ಸ್ಟೋರಿ ಹೇಳುತ್ತಿದ್ದರು. ನಾನು ಸುಧಾಮೂರ್ತಿಯವರ ಕೃತಿಗಳನ್ನು ಓದುತ್ತಿರುತ್ತೇನೆ. ಅದರಿಂದ ನನಗೆ ಬರೆಯಲು ಪ್ರೇರಣೆ ದೊರೆಯಿತು." -ಪರಿಣಿತ, ಬಾಲ ಲೇಖಕಿ