

ಕೆ.ಆರ್.ನಗರ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಂಟು ಸದಸ್ಯರು ಆಯ್ಕೆಯಾಗಿದ್ದು, ಎರಡನೇ ಬಾರಿ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದಾರೆ.
14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರ ಜತೆಗೆ ಸೋಮವಾರ ನಡೆದ ಮತ ಎಣಿಕೆಯಲ್ಲಿ ಐವರು ಚುನಾಯಿತರಾಗಿದ್ದು ಅಧಿಕಾರ ನಡೆಸಲು ಅಗತ್ಯವಿರುವ ಸಂಖ್ಯೆ ತಲುಪಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಆ ಮೂಲಕ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಇದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಚೈತನ್ಯ ಮೂಡಿಸಿದೆ. ಇವರೊಂದಿಗೆ ನಾಲ್ವರು ಜೆಡಿಎಸ್ ಪಕ್ಷದ ಬೆಂಬಲಿತರು ಆಯ್ಕೆಯಾಗಿದ್ದು ಜತೆಗೆ ಇಬ್ಬರು ಪಕ್ಷೇತರರು ಚುನಾಯಿತರಾಗಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ದಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ.ಪಂ. ಮಾಜಿ ಸದಸ್ಯೆ ಪುಷ್ಪಲತಾ ರಮೇಶ್(283) ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ದಿಯಾಗಿದ್ದ ಪುರಸಭೆ ಸದಸ್ಯ ಉಮೇಶ್ ಅವರನ್ನು 125 ಮತಗಳ ಅಂತರದಿಂದ ಪರಾಭವಗೊಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಸಾಲಗಾರರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿ ಕಣದಲ್ಲಿದ್ದ ಕುಳ್ಳಬೋರೇಗೌಡ (55), ಚಂದ್ರೇಗೌಡ (51), ಚಂದ್ರಹಾಸ (65), ಎಚ್.ಕೆ.ಪ್ರದೀಪ್‌ಕುಮಾರ್ (56) ಆಯ್ಕೆಯಾಗಿದ್ದು ಇವರೊಂದಿಗೆ ಜೆಡಿಎಸ್ ಬೆಂಬಲಿತರಾಗಿ ಸ್ಪರ್ದೆ ಮಾಡಿದ್ದ ಎಸ್.ಎಂ.ಸೋಮಣ್ಣ (25), ದೊಡ್ಡಯ್ಯ (58), ರಮೇಶ್‌ನಾಯಕ (76), ಗಾಯತ್ರಮ್ಮ (54) ಚುನಾಯಿತರಾಗಿದ್ದಾರೆ.
ಪಕ್ಷೇತರರಾಗಿ ಅಖಾಡದಲ್ಲಿದ್ದ ಎಂ.ಎಸ್.ಹರಿಚಿದಂಬರ (62), ಮಹೇಶ್ (61) ನಿರ್ದೇಶಕರಾಗಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿ ಮಂಗಳಾ ಪ್ರಸಾದ್, ಇಂದ್ರೇಶ್, ಡಿ.ಆರ್.ರಾಹುಲ್ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ನಟರಾಜು, ಶಂಕರ್‌ಸ್ವಾಮಿ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ಸಿ.ಪಿ.ರಮೇಶ್‌ಕುಮಾರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಪಿಎಂಎಸಿ ಮಾಜಿ ಅಧ್ಯಕ್ಷ ಕೆಡಗನಟರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಸಿ.ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಕಾಂಗ್ರೆಸ್ ಮುಖಂಡರಾದ ದಿಡ್ಡಹಳ್ಳಿ ಬಸವರಾಜು, ಆದರ್ಶ, ಕೆ.ವಿನಯ್, ಪುಟ್ಟರಾಜು, ಬಿ.ಟಿ.ಮೋಹನ್, ಒಂಟಿಮನೆ ಉಮಾಶಂಕರ್, ಸಂಜಯ್‌ತಿಲಕ್, ಸಾಗರ್ ಮತ್ತಿತರರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.