ಹಾಳುಬಿದ್ದ ಕೆ.ಎಚ್. ಕಲಾಸೌಧ : ಪಾಲಿಕೆ ಉದಾಸೀನದಿಂದ ಕಮರಿದ ಕಲಾ ಚಟುವಟಿಕೆಗಳು

Raghu_22_KH_Kalasoudha_Hanumanthanagar_Story [Pankaja] (2)
Published on

ಪಂಕಜ ಕೆ.ಎಂ. ಬೆಂಗಳೂರು

ಸಂಗೀತ, ನೃತ್ಯ, ನಾಟಕ ತಾಲೀಮು ಸೇರಿ ರಂಗ ಚಟುವಟಿಕೆಗಳೊಂದಿಗೆ ಸಕ್ರಿಯವಾಗಿದ್ದ ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾಸೌಧ ಕಳೆದೊಂದು ವರ್ಷದಿಂದ ಸ್ತಬ್ಧವಾಗಿದೆ. ನಿರ್ವಹಣೆ, ಸೌಲಭ್ಯಗಳ ಕೊರತೆ, ಟೆಂಡರ್ ಸಮಸ್ಯೆ ಇತ್ಯಾದಿ ಕಾರಣಗಳಿಂದಾಗಿ ಬೀಗ ಜಡಿಯಲಾಗಿದೆ. ಇಡೀ ಕಟ್ಟಡ ಧೂಳುಮಯವಾಗಿದೆ. ರಂಗ ಪರದೆ ಹರಿದು, ಬಹುತೇಕ ಉಪಕರಣಗಳು ಕಳ್ಳರ ಪಾಲಾಗಿವೆ.

ಕೆ.ಎಚ್. ಕಲಾಸೌಧದಲ್ಲಿ ಡಿವಿಜಿ ಕಲಾ ಗ್ಯಾಲರಿ ಇದೆ. ಕಲಾಸೌಧದ ಬಾಗಿಲು ಮುಚ್ಚುತ್ತಲೇ ಅದು ಸ್ಥಗಿತಗೊಂಡಿದೆ. ಇದರಿಂದ ಚಿತ್ರಕಲೆ ಪ್ರದರ್ಶನ, ತರಬೇತಿ ಸೇರಿ ಇತರೆ ಕಲಾ ಚಟುವಟಿಕೆಗಳಿಗೂ ಹಿನ್ನಡೆ ಆಗಿದೆ. ಯುವ ಕಲಾವಿದರು ಸೇರಿ ಸ್ಥಳೀಯರಿಗೆ ಮನರಂಜನೆಗಾಗಿ ಇದ್ದ ಅವಕಾಶವೂ ಕೈತಪ್ಪಿದಂತಾಗಿದೆ ಎನ್ನುತ್ತಾರೆ ಹನುಮಂತನಗರ ನಿವಾಸಿ ಚಂದ್ರಶೇಖರ್.

ಕಲಾಸೌಧ 300 ಆಸನಗಳನ್ನು ಹೊಂದಿದ್ದು, ಪಾಲಿಕೆ ಸಭೆ ಸಮಾರಂಭಗಳನ್ನೂ ನಡೆಸಲಾಗುತ್ತಿತ್ತು. ಕಳೆಗುಂದಿದ್ದ ಸಭಾಂಗಣವನ್ನು 2009ರಲ್ಲಿ ರಂಗ ನಿರ್ದೇಶಕ ಪಿ.ಡಿ. ಸತೀಶ್‌ಚಂದ್ರ ಅವರು ಗುತ್ತಿಗೆ ಪಡೆಯುವ ಮೂಲಕ ಹೊಸ ರೂಪ ನೀಡಿದರು. ನಂತರ ಮತ್ತೆ ರಂಗ ಚಟುವಟಿಕೆ ಪ್ರಾರಂಭವಾದವು. ಡಾ. ರಾಜ್ ಅಭಿನಯದ ‘ಹೊಸ ಬೆಳಕು’ ಸಿನಿಮಾದ ಕಥೆ ಆಧರಿಸಿ ಸಾಮಾಜಿಕ ನಾಟಕ ನಿರ್ಮಿಸಿದರು. ಹಲವು ಪ್ರದರ್ಶನಗಳ ಮೂಲಕ ಜನರನ್ನು ಸೆಳೆದರು. 2018ರವರೆಗೆ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಕಲಾಸೌಧವನ್ನು ನಿರ್ವಹಣೆಯೂ ಚೆನ್ನಾಗಿಯೇ ಇತ್ತು.

ನಂತರದಲ್ಲಿ ಪ್ರಭಾತ್ ಕಲಾ ಸಂಸ್ಥೆ ಟೆಂಡರ್ ಪಡೆದು 4 ವರ್ಷಗಳ ಕಾಲ ನಿರ್ವಹಣೆ ಮಾಡಿತು. ಆದರೆ ಇದರಿಂದ ಹೆಚ್ಚು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಪಾಲಿಕೆ ದಿನಕ್ಕೊಂದು ತರಕಾರು ಮಾಡಲು ಶುರು ಮಾಡಿತು. ಇದರಿಂದ ಬೇಸತ್ತು ಪ್ರಭಾತ್ ಸಂಸ್ಥೆ ಹೊರನಡೆಯಿತು. ಬಳಿಕ ಯಾರೂ ಟೆಂಡರ್‌ಗೆ ಮುಂದಾಗಲಿಲ್ಲ. ಪಾಲಿಕೆಯೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡದೆ ಕಲಾಸೌಧಕ್ಕೆ ಬೀಗ ಜಡಿಯಿತು.

ಕೋಟ್:

ಕಲಾಸೌಧಕ್ಕೆ ತನ್ನದೇ ಆದ ಇತಿಹಾಸವಿದೆ. ಹಾಗಾಗಿ ಪಾಲಿಕೆ ಅದನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಕೆಲಸ ಕೈಗೊಳ್ಳಬೇಕು. ಶೀಘ್ರವೇ ಟೆಂಡರ್ ಕರೆದು ಪುನಃ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾಗುವಂತೆ ಮಾಡಬೇಕು.

-ಪಿ.ಡಿ. ಸತೀಶ್‌ಚಂದ್ರ, ರಂಗ ನಿರ್ದೇಶಕ

ಕಲಾಸೌಧದಲ್ಲಿ ಚಟುವಟಿಕೆಗಳು ನಡೆಯುವಾಗ ಈ ಸ್ಥಳ ನಿತ್ಯವೂ ಜನರಿಂದ ತುಂಬಿರುತ್ತಿತ್ತು. ವಾಯುವಿಹಾರಕ್ಕೆ ಬರುತ್ತಿದ್ದವರು ಕಾರ್ಯಕ್ರಮಗಳನ್ನು ನೋಡಿ ಆನಂದಿಸುತ್ತಿದ್ದರು. ಇದನ್ನು ಮುಚ್ಚಿದ್ದರಿಂದ ಈಗ ಜನರ ಸಂಖ್ಯೆಯೂ ಕಡಿಮೆಯಾಗಿದೆ.

-ಜಯರಾಮ ಹೆಗಡೆ, ಹನುಮಂತನಗರ

ಕಲಾಸೌಧದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭದಲ್ಲಿ ರಾಮಾಂಜನೇಯ ಗುಡ್ಡ ಜನರಿಂದ ತುಂಬಿರುತ್ತಿತ್ತು. ಮೇಲಿನ ಬಯಲು ರಂಗ ಮಂದಿರದಲ್ಲಿ ನಿತ್ಯವೂ ಕಲಾವಿದರು ತಾಲೀಮು ನಡೆಸುತ್ತಿದ್ದರು. ಆದರೆ ಈಗ ಇಡೀ ವಾತಾವರಣ ಬಿಕೋ ಎನ್ನುತ್ತಿದೆ.

-ಅಂಬರೀಶ್ ವರ್ಮ, ಶ್ರೀನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net