

ಪಾಂಡವಪುರ: ಪಾಂಡವಪುರ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಜ್ಯೋತಿಲಕ್ಷ್ಮೀ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎಲ್.ಅಶೋಕ್ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 23 ಸದಸ್ಯ ಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್ 18, ರೈತಸಂಘ, ಕಾಂಗ್ರೆಸ್ ಮೈತ್ರಿಕೂಟ 4 ಹಾಗೂ ಬಿಜೆಪಿಯ ಒಬ್ಬ ಸದಸ್ಯ ಚುನಾಯಿತರಾಗಿದ್ದಾರೆ. ಪುರಸಭೆಯ ಎರಡನೇ ಅವಧಿಯ ಆಡಳಿತಕ್ಕೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿತ್ತು. ಚುನಾವಣೆ ಪಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಅಧ್ಯಕ್ಷ ಗಾದಿ ಬಯಸಿ ಜೆಡಿಎಸ್‌ನಿಂದ ಜ್ಯೋತಿಲಕ್ಷ್ಮೀ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಲ್.ಅಶೋಕ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ಎಸ್.ಸಂತೋಷ್ ಇಬ್ಬರು ಅಭ್ಯರ್ಥಿಗಳ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಬಿಜೆಪಿಗೆ ಒಲಿದ ಭಾಗ್ಯ: 23 ಸದಸ್ಯರ ಪೈಕಿ ಬಿಜೆಪಿಯಿಂದ ಆಯ್ಕೆಯಾಗಿರುವ ಏಕೈಕ ಸದಸ್ಯ 15 ವಾರ್ಡಿನ ಎಲ್.ಅಶೋಕ್ ಅವರಿಗೆ ಅದೃಷ್ಟ ಕೈ ಹಿಡಿಯಿತು. ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯಿಂದ ಉಪಾಧ್ಯಕ್ಷ ಗಾದಿ ಬಿಜೆಪಿಗೆ ಒಲಿಯಿತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಕಾರಣ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಬಹುತೇಕರು ಉಪಾಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದರು. ಆದರೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಪಾಲನೆ ಮಾಡಬೇಕು ಎಂಬ ಉದ್ದೇಶದಿಂದ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟು ಮೈತ್ರಿಧರ್ಮ ಪಾಲನೆ ಮಾಡಿದ ಪರಿಣಾಮ ಜೆಡಿಎಸ್ ಆಕಾಂಕ್ಷಿತರು ಉಪಾಧ್ಯಕ್ಷ ಸ್ಥಾನದಿಂದ ವಂಚಿತರಾದರು. ಅನಿರೀಕ್ಷಿತ ಆಯ್ಕೆಯಿಂದ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್ ಆಕಾಂಕ್ಷಿತರು ಕೊಂಚ ವಿಚಲಿತರಾದರು.
ಅಸಮಾಧಾನಿತ ಸದಸ್ಯರ ಗೈರು: ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಪರಿಣಾಮ ಜೆಡಿಎಸ್ ಸದಸ್ಯರಾದ 6ನೇ ವಾರ್ಡಿನ ಸುನೀತಾ ಕಂದಿರೇಶನ್, 14 ವಾರ್ಡಿನ ಸರಸ್ವತಿ ಜಯರಾಮು, 20ನೇ ವಾರ್ಡಿನ ಸುಧಾ ಜಯರಾಮು, 21 ವಾರ್ಡಿನ ಶ್ವೇತಾ ಉಮೇಶ್ ಹಾಗೂ 22ನೇ ವಾರ್ಡಿನ ಮಂಗಳ ಕೃಷ್ಣೇಗೌಡ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಕಳೆದ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ 9ನೇ ವಾರ್ಡಿನಿಂದ ಆಯ್ಕೆಯಾದ ಜ್ಯೋತಿಲಕ್ಷ್ಮೀ ಅವರಿಗೆ ಅಧ್ಯಕ್ಷ ಸ್ಥಾನ ಒಲಿದ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರಾದ ಮಂಗಳ ಕೃಷ್ಣೇಗೌಡ, ಸುನೀತಾ ಕದಿರೇಶನ್, ಶ್ವೇತಾ ಉಮೇಶ್ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಬ್ಬ 12ನೇ ವಾರ್ಡಿನ ಸದಸ್ಯ ಎ.ಕೃಷ್ಣ ಅವರೂ ಚುನಾವಣೆಗೆ ಗೈರಾಗಿದ್ದರು.
ಚುನಾವಣೆಗೂ ಮೊದಲು ಜೆಡಿಎಸ್ ಸದಸ್ಯರ ಸಭೆ: ಚುನಾವಣಾ ಪ್ರಕ್ರಿಯೆಗೂ ಮೊದಲು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಸದಸ್ಯರ ನಡೆಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಯಿತು. ಪಟಾಕಿ ಸಿಹಿ ವಿತರಿಸಿ ಸಂಭ್ರಮ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ಎಲ್ಲ ಸದಸ್ಯರ ಬೆಂಬಲ ಪಡೆದು ಪಟ್ಟಣದ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಉಪಾಧ್ಯಕ್ಷ ಎಲ್.ಅಶೋಕ್ ಮಾತನಾಡಿದರು.
ಪುರಸಭೆ ಸದಸ್ಯರಾದ ಶಿವಕುಮಾರ್, ಚಂದ್ರು, ಅರ್ಚನಾ ಚಂದ್ರು, ಸರಸ್ವತಿ, ಸುಧಾ, ಪಾರ್ಥಸಾರಥಿ, ಆರ್.ಸೋಮಶೇಖರ್, ಎಂ.ಗಿರೀಶ್, ಗೀತಾ ಅರ‌್ಮುಗಂ, ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್ ಇತರರಿದ್ದರು.