

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ(37) ಎಂಬುವರನ್ನು ಅವರ ಅಕ್ಕನ ಮಗನೇ ಕೊಂದಿರುವುದು ತನಿಖೆಯಿಂದ ದೃಢಪಟ್ಟಿದೆ. ಭಾನುವಾರ ತಡರಾತ್ರಿ ಹೇಮಾವತಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ಎಂದು ತೀರ್ಮಾನಕ್ಕೆ ಬಂದಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿ ಅಪ್ತಾಪ್ತ ಬಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಬಗ್ಗೆ ಹೇಮಾವತಿ ಅವರ ಪತಿ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ವಿಠಲ ಪೈ ಯಾನೆ ಶೈಲೇಶ್ ಎಂಬುವರು ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಹೇಮಾವತಿ ಅವರ ಮನೆಯಲ್ಲಿ ಅಂದು ರಾತ್ರಿ ತಂಗಿದ್ದ ಅಕ್ಕನ ಮಗ, ಹತ್ತನೇ ತರಗತಿ ವಿದ್ಯಾರ್ಥಿ ಹೇಮಾವತಿ ಮಲಗಿದಲ್ಲಿಗೆ ಹೋಗಿ ದೇಹ ಸುಖ ಬಯಸಿದ್ದು, ಇದಕ್ಕೆ ಹೇಮಾವತಿಯವರು ಪ್ರತಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆ ವೇಳೆ ಬಾಲಕ ಬಾಯಿ ಬಿಟ್ಟರುವುದಾಗಿ ಪೊಲೀಸರು ತಿಳಿಸಿದ್ದಾರೆ. ರೋಪಿ ಅಪ್ರಾಪ್ತ ಬಾಲಕನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಬಿ.ಎಸ್. ತಿಳಿಸಿದ್ದಾರೆ.
ಬಾಲಕನ ಮೈ ಮೇಲೆ ಪರಚಿದ ಗಾಯಗಳಿರುವುದನ್ನು ಬಾಲಕನ ತಂದೆಯೇ ಪೊಲೀಸರಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ಬಾಲಕನ ಮೇಲೆ ಪ್ರಾರಂಭಿಕ ಹಂತದಲ್ಲಿಯೇ ಸಂಶಯ ಮೂಡಿತ್ತು. ಇನ್ನೂ ಹದಿನೈದು ವರ್ಷ ತುಂಬದ ಬಾಲಕನೋರ್ವ ಈ ರೀತಿ ಕೊಲೆ ಮಾಡುವುದು ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸಿ ಅನ್ಯರ ಭಾಗೀದಾರಿಕೆಯನ್ನು ಅನುಮಾನಿಸಿ ತನಿಖೆ ನಡೆಸಲಾಗಿತ್ತು. ಆದರೆ ತನಿಖೆಯ ವೇಳೆ ತಾನು ಓರ್ವನೇ ಈ ಕೃತ್ಯವೆಸಗಿರುವುದಾಗಿ ಬಾಲಕ ತಪ್ಪು ಒಪ್ಪಿಕೊಂಡಿರುವುದರಿಂದ ಆತನನ್ನು ಬಂಧನ ಪ್ರಕ್ರಿಯೆಗೆ ಒಳಪಡಿಸಲಾಯಿತು.
ಬಾಲಕ ಮಲಗಿದ್ದ ತನ್ನ ಚಿಕ್ಕಮ್ಮನೊಡನೆ ಲೈಂಗಿಕ ಕ್ರಿಯೆ ಬಯಸಿ ಆಕೆಯನ್ನು ಸ್ಪರ್ಶಿಸಿದನೆಂದು, ಎಚ್ಚರಗೊಂಡ ಹೇಮಾವತಿ ಆತನ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಮ್ಮನೆ ನಿದ್ರಿಸಬೇಕೆಂದು ಗದರಿಸಿದ್ದರು. ನಾಳೆ ತನ್ನ ಕೃತ್ಯವನ್ನು ನೆರೆಹೊರೆಯವರಿಗೆ ತಿಳಿಸಿದರೆ ತಾನು ಅವಮಾನಿತನಾಗುವ ಸಾಧ್ಯತೆ ಇದೆ ಎಂದು ಅಂಜಿಕೆಯಿಂದ ನಿದ್ರಿಸಲಾಗದೆ ಒದ್ದಾಡಿದ್ದಾನೆ. ಸುಮಾರು ಅರ್ಧ ಗಂಟೆಯ ಬಳಿಕ ಆಕೆಯನ್ನು ಕೊಲ್ಲುವ ನಿರ್ಧಾರವನ್ನು ತಳೆದಿದ್ದ. ಬಳಿಕ ನಿದ್ರೆಗೆ ಜಾರಿದ್ದ ಚಿಕ್ಕಮ್ಮನನ್ನು ಕುತ್ತಿಗೆ ಹಿಸುಕಿ ಉಸಿರು ಕಟ್ಟಿಸಿ ಕೊಲೆಗೈದಿರುವುದಾಗಿ ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಚಿಕ್ಕಮ್ಮ ಮೃತಪಟ್ಟಿರುವುದು ದೃಢವಾದೊಡನೆ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಾನೇ ಮೊದಲಾಗಿ ತನ್ನ ತಂದೆಗೆ ತಿಳಿಸಿ ಪಾರಾಗಲು ಯತ್ನಿಸಿದ್ದ. ಆದರೆ ಕುತ್ತಿಗೆ ಹಿಸುಕಿದ ವೇಳೆ ಆಕೆ ಪ್ರಾಣ ರಕ್ಷಣೆಗಾಗಿ ಬಾಲಕನಿಗೆ ಪರಚಿದ್ದು, ಈ ಪರಚಿದ ಗಾಯ ಆತನನ್ನು ಕಾನೂನು ಕುಣಿಕೆಗೆ ಸಿಲುಕಿಸಲು ಸಹಕಾರಿಯಾಯಿತು.