

ಬೆಂಗಳೂರು: ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ನೆಮ್ಮದಿಯ ವಾತಾವರಣ ನೆಲೆಗೊಳ್ಳಲಿದೆ ಎಂದು ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ.
ಗಾಂಧಿ ಭವನದಲ್ಲಿ ಅಂತರರಾಷ್ಟ್ರೀಯ ಆರ್ಟ್ ಆಫ್ ಗೀವಿಂಗ್ ದಿನಾಚರಣೆ ಉದ್ಘಾಟಿಸಿ ಜಾಗತಿಕ ಮಟ್ಟದಲ್ಲಿ ಸಮಾಜ ಸೇವೆ ಹಾಗೂ ಸಮಾಜದ ಪರಿವರ್ತನೆಗಾಗಿ ಮಾಜಿ ಲೋಕಸಭಾ ಸದಸ್ಯ ಹಾಗೂ ಕಿಟ್ ಕೆಐಐಟಿ ಮತ್ತು ಕಿಸ್ (ಕೆಐಎಸ್‌ಎಸ್) ವಿಶ್ವವಿದ್ಯಾಲಯಗಳ ಸ್ಥಾಪಕ ಅಚ್ಯುತ ಸಮಂತಾ ರಚಿಸಿರುವ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಬಂದಿದ್ದ ಉತ್ತಮ ನೆರೆಹೊರೆಯವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಾರ್ವಜನಿಕರ ನಡುವೆ ಉತ್ತಮ ಒಡನಾಟವಿದ್ದರೆ ಸೌಹಾರ್ದತೆ ಮೂಡಲಿದೆ. ಆರ್ಟ್ ಆಫ್ ಗೀವಿಂಗ್ ಉತ್ತಮ ಉದ್ದೇಶ ಹೊಂದಿರುವುದು ಕಾರ್ಯಕ್ರಮದಿಂದ ತಿಳಿಯುತ್ತಿದೆ. ಲಂಚದ ವಿಚಾರದಲ್ಲಿ ಆರ್ಟ್ ಆಫ್ ಗೀವಿಂಗ್, ಆರ್ಟ್ ಆಫ್ ಟೇಕಿಂಗ್ ಎರಡೂ ತಪ್ಪು. ಚೀನಾನದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ಇದೆ. ಆದರೂ ಅಲ್ಲಿ ಭಾರತಕ್ಕಿಂತ ಹೆಚ್ಚು ಭ್ರಷ್ಟಾಚಾರವಿದೆ. ನಮ್ಮಲ್ಲಿ ಒಂದು ಭ್ರಷ್ಟಾಚಾರ ಪ್ರಕರಣ ಇತ್ಯರ್ಥವಾಗಲು 45 ವರ್ಷ ಆಗುತ್ತಿದೆ ಎಂದು ವಿಷಾದಿಸಿದರು.
ಐಎಎಸ್ ಅಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಪರೋಪಕಾರ, ಕರುಣೆ, ಶಾಂತಿ ನಿಜವಾದ ಮಾನವೀಯತೆಯಾಗಿದೆ. 12 ನೇ ಶತಮಾನದ ಬಸವಾದಿ ಶರಣರು ಜಾತಿ, ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದರು. ಕಷ್ಟುಪಟ್ಟು ದಕ್ಕಿಸಿಕೊಂಡ ಸಿರಿ ಸಂಪತ್ತನ್ನು ಹಂಚುವುದೇ ನಿಜವಾದ ದಾಸೋಹ ಎಂದು ಜಗತ್ತಿಗೆ ಸಾರಿದರು. ನಂತರ ಬಂದ ಪುರಂದರ ದಾಸರು ನಾನು ಎನ್ನುವ ಸ್ವಾರ್ಥ ತೊರೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಉದಾತ್ತ ಚಿಂತನೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ಆದರೆ ಈಗ ಸ್ವಾರ್ಥ ಹೆಚ್ಚುತ್ತಿದೆ, ಸಾಮಾಜಿಕ ಮಾಧ್ಯಮಗಳಿಂದ ಮಾನವೀಯ ಸಂಬಂಧ ಹಾಳಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಗಾಯಕಿ ಸವಿತಕ್ಕ ಆರ್ಟ್ ಆಫ್ ಗೀವಿಂಗ್ ಅಧ್ಯಕ್ಷ ಗುರುಪ್ರಸಾದ್, ಸದಸ್ಯರಾದ ಮಮತಾ ಎನ್.ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.