ಸುಪ್ರೀಂಕೋರ್ಟ್‌ನಿಂದ ಹೋರಾಟಗಾರರಿಗೆ ನ್ಯಾಯ

Published on

ಕೊಟ್ಟಗಾಳು ಗ್ರಾಪಂ ಆಶ್ರಯ ನಿವೇಶನ ಹಂಚಿಕೆ ಪ್ರಕರಣ |  ದೊಂಬರದೊಡ್ಡಿ ರವಿಕುಮಾರ್ ಹೇಳಿಕೆ

ಕನಕಪುರ: ಕೊಟ್ಟಗಾಳು ಗ್ರಾಮ ಪಂಚಾಯಿತಿ ಆಶ್ರಯ ನಿವೇಶನ ಹಂಚಿಕೆಯಲ್ಲಿ ಆಗಿದೆಯೆನ್ನಲಾದ ಅಕ್ರಮ ಹಗರಣವನ್ನು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿರುವುದು ಹೋರಾಟಗಾರರಿಗೆ ಹೊಸ ಜೀವ ತುಂಬಿದೆ ಎಂದು ಸಾಮಾಜಿಕ ಕಾರ್ಯಕರ್ತ ದೊಂಬರದೊಡ್ಡಿ ರವಿಕುಮಾರ್ ತಿಳಿಸಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನ್ಯಾಯಾಲಯದ ಆದೇಶದ ಪ್ರತಿಗಳನ್ನು ನೀಡಿ ಮಾತನಾಡಿದರು. ಹಾರೋಹಳ್ಳಿ ತಾಲೂಕು ಕೊಟ್ಟಗಾಳು ಗ್ರಾಪಂ ಗೊಲ್ಲಹಳ್ಳಿ ಸ. ನಂ. 105/7, 105/8 ಮತ್ತು 38/3 ರಲ್ಲಿ ಆಶ್ರಯ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ 2015ರಲ್ಲಿ ಅಂದಿನ ಗ್ರಾಪಂ ಅಧ್ಯಕ್ಷರು ಕನಕಪುರ ನಗರದ ಸೈಬರ್ ಸೆಂಟರ್‌ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅನರ್ಹ ಫಲಾನುಭವಿಗಳಿಗೆ ಅಕ್ರಮವಾಗಿ ಇ-ಖಾತೆ ಮಾಡಿ ಭ್ರಷ್ಟಾಚಾರ ಎಸಗಿದ್ದ ಹಿನ್ನೆಲೆಯಲ್ಲಿ ಅಂದು ಎಸಿಬಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಉನ್ನತ ಮಟ್ಟದ ತನಿಖೆ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮನವಿ ಮಾಡಲಾಗಿತ್ತು, ಅಂದಿನ ಗ್ರಾಪಂ ಅಧ್ಯಕ್ಷ ಜಿ.ಎಸ್.ಸುರೇಶ್, ಅಭಿವೃದ್ಧಿ ಅಧಿಕಾರಿಗಳಾದ ಲೋಕೇಶ್, ರಾಜೇಶ್ವರಿ, ಕಾರ್ಯದರ್ಶಿ ಮಹೇಶ್ವರ್, ತಾಪಂ ಅಧಿಕಾರಿ ಶಿವರಾಮ್ ವಿರುದ್ಧ ವಿಚಾರಣೆಗೆ ಅನುಮತಿ ನೀಡಲಾಗಿತ್ತು. ಈ ಸಂಬಂಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗ್ರಾಪಂ ಅಧ್ಯಕ್ಷ ಸುರೇಶ್ ಇತರರು ಹೈಕೋರ್ಟ್‌ನಲ್ಲಿ ಕೇಸ್ ರದ್ದುಗೊಳಿಸುವಂತೆ ಮಾಡಿದ ಮನವಿಗೆ ಹೈಕೋರ್ಟ್ ದೂರನ್ನು ರದ್ದುಗೊಳಿಸಿತ್ತು, ಸಾರ್ವಜನಿಕ ವಲಯದಲ್ಲಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು ಎಂದರು. ಆದರೆ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ನ್ಯಾಯ ಕೋರಿದ್ದೆ, ನನ್ನ ಪರ ನ್ಯಾಯವಾದಿ ಆಲ್‌ಜೋ ಕೆ. ಜೋಸೆಫ್ ವಾದ ಮಂಡಿಸಿದ್ದರು ಎಂದು ವಿವರಿಸಿದರು.

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ಸುಂಜೀವ್ ಖನ್ನಾ ಅವರು ಪ್ರಕರಣವನ್ನು ತೀವ್ರವಾಗಿ ಪರಾಮರ್ಶಿಸಿ ಎರಡೂ ಕಡೆ ವಾದವನ್ನು ಆಲಿಸಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಆದೇಶಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಸಂಬಂಧಪಟ್ಟ ಗ್ರಾಮಾಂತರ ಪೋಲಿಸ್ ಅಧಿಕಾರಿಗಳಿಗೆ ಆದೇಶದ ಪ್ರತಿ ರವಾನೆಯಾಗಿದೆ, ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ, ಆದ್ದರಿಂದ ಸರ್ಕಾರ ನೂರಾರು ಫಲಾನುಭವಿಗಳಿಗೆ ಆಶ್ರಯ ನಿವೇಶನ ನೀಡಲಿ ಎಂದು ರವಿಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net