

ಶ್ರೀರಂಗಪಟ್ಟಣ: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂ.27ರಂದು ಒಕ್ಕಲಿಗರು ಸೇರಿದಂತೆ ಎಲ್ಲ ಸಮುದಾಯದ ಜನರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ತಿರ್ಮಾನಿಸಲಾಯಿತು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದವರು, ವಿವಿಧ ಸಂಘಟನೆ ಸೇರಿದಂತೆ ಎಲ್ಲ ವರ್ಗದ ಮುಖಂಡರೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಆಚರಣೆ ಹಾಗೂ ಸಿದ್ಧತೆ ಕುರಿತು ಚರ್ಚಿಸಲಾಯಿತು.
ಹಿರಿಯ ಮುಖಂಡ ಪೈ.ಮುಕುಂದ ಮಾತನಾಡಿ, ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯಕ್ಕೆ ಮೀಸಲಲ್ಲ. ಎಲ್ಲ ಜನರಿಗೂ ಆಸರೆ ನೀಡಿದ ಮಹಾನಾಯಕ. ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಕೆಂಪೇಗೌಡರ ಭಾವಚಿತ್ರವನ್ನು ಸಹ ಕ್ಷೇತ್ರದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವಂತಾಗಬೇಕು. ತಾಲೂಕು ಆಡಳಿತದ ನೇತೃತ್ವದಲ್ಲಿ ಕ್ಷೇತ್ರದ ಎಲ್ಲ ಸಂಘಟನೆಗಳು, ಸಮುದಾಯ ಮುಖಂಡರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಪುರಸಭಾ ಸದಸ್ಯ ಎಸ್.ಪ್ರಕಾಶ್ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಗೌಡಹಳ್ಳಿ ದೇವರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯನ್ನು ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ಯಾವುದೇ ಪಕ್ಷ ಭೇದವಿಲ್ಲದೆ ಪ್ರತ್ಯೇಕವಾಗಿ ಆಚರಿಸದೆ ಎಲ್ಲರು ಒಗ್ಗಟ್ಟಾಗಿ ತಾಲೂಕು ಆಡಳಿತದೊಂದಿಗೆ ಆಚರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಅಂದು ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಜಾನಪದ ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮಾಡಲಾಗುವುದು. ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಉಪನ್ಯಾಸ ನೀಡಲಾಗುವುದು ಎಂದರು.
ಪುರಸಭಾ ಸದಸ್ಯ ಗಂಜಾಂ ಕೃಷ್ಣಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ ನಗುವನಹಳ್ಳಿ ಶಿವಸ್ವಾಮಿ, ಕಾಂಗ್ರೆಸ್ ನಗರಾಧ್ಯಕ್ಷ ಸುರೇಶ್, ಕರವೇ ಮುಖಂಡ ಚಂದಗಾಲು ಶಂಕರ್, ಅಂಬೇಡ್ಕರ್ ಒಕ್ಕೂಟಗಳ ಅಧ್ಯಕ್ಷ ಗಂಜಾಂ ರವಿಚಂದ್ರು, ಮುಖಂಡರಾದ ವಡಿಯಾಂಡಹಳ್ಳಿ ಉದಯ್, ಕೊಪ್ಪಲು ಸಂದೇಶ್, ಬಿಜೆಪಿ ಮುಖಂಡ ಸುಧಾಕರ್, ಸುನೀಲ್, ಕೆಂಪೇಗೌಡ ಯುವ ಶಕ್ತಿ ವೇದಿಕೆ ಅಧ್ಯಕ್ಷ ಮಹೇಶ್, ಜೈಶ್ರೀರಾಮ್ ರವಿ, ಚಂದನ್, ರುಕ್ಮಾಂಗದ ಉಪಸ್ಥಿತರಿದ್ದರು.