14 ರಂದು ಕೇಂದ್ರ ಸಚಿವ ಸೋಮಣ್ಣ ಟೆಂಪಲ್​ ರನ್​

V Somanna
Published on

ತುಮಕೂರು: ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿ.ಸೋಮಣ್ಣ ಜೂ.14 ರಂದು ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದು ಇಡೀ ದಿನ ಟೆಂಪಲ್​ ರನ್​ ಕೈಗೊಳ್ಳಲಿದ್ದಾರೆ. ಸಿದ್ದಗಂಗಾ ಮಠದಿಂದ ಆರಂಭವಾಗುವ ತೀರ್ಥ ಯಾತ್ರೆ ತಿಪಟೂರು ತಾಲೂಕು ನೊಣವಿನಕೆರೆ ಮಠದಲ್ಲಿ ಸಂಪನ್ನಗೊಳ್ಳಲಿದೆ.

ಬೆಳಗ್ಗೆ 9ಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಲಿರುವ ವಿ.ಸೋಮಣ್ಣ ಶಿವಕುಮಾರ ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವರು. ಬಳಿಕ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಶ್ರೀಮಠದಲ್ಲಿ ಪ್ರಸಾದ ಸೇವಿಸಿ ಕೊರಟಗೆರೆ ತಾಲೂಕಿನ ಎಲೆರಾಂಪುರ ಮಠ, ಬಾಳೆಹೊನ್ನೂರು ಶಾಖಾ ಮಠ ಸಿದ್ದರಬೆಟ್ಟ ಸುಕ್ಷೇತ್ರಕ್ಕೆ ಭೇಟಿ ನೀಡುವರು. ಬಳಿಕ ತುಮಕೂರು ತಾಲೂಕು ಬೆಳ್ಳಾವಿ ಶ್ರೀ ಕಾರದೇಶ್ವರ ಮಠಕ್ಕೆ ಭೇಟಿ ನೀಡುವರು. ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆ ಮಠಕ್ಕೆ ಅಲ್ಲಿಂದ ತಿಪಟೂರು ತಾಲೂಕಿನ ವಿವಿಧ ಮಠಗಳಿಗೆ ಭೇಟಿ ನೀಡುವರು. ಶ್ರೀ ರಂಗಾಪುರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವರು.

ಅಜ್ಜಯ್ಯನ ಸನ್ನಿಧಿಗೆ ಭೇಟಿ: ಬಹಳವಾಗಿ ನೆಚ್ಚಿಕೊಂಡಿರುವ ನೊಣವಿನಕೆರೆ ಅಜ್ಜಯ್ಯನ ಸನ್ನಿಧಿಗೆ ಸಚಿವರಾದ ಬಳಿಕ ವಿ.ಸೋಮಣ್ಣ ಭೇಟಿ ನೀಡುತ್ತಿರುವುದು ವಿಶೇಷವೆನಿಸಿದೆ. ಕಷ್ಟ&ಕಾರ್ಪಣ್ಯಗಳಿಗೆ ಸದಾ ಅಜ್ಜಯ್ಯನ ಸನ್ನಿಧಿಗೆ ಮೊರೆ ಹೋಗುವ ಸೋಮಣ್ಣ ಈ ಬಾರಿ ಉನ್ನತ ಅಧಿಕಾರ ಪಡೆಯುವ ಸಂದರ್ಭದಲ್ಲಿ ಭೇಟಿ ನೀಡುತ್ತಿದ್ದಾರೆ. ಇಡೀ ದಿನ ಮಠ&ಮಾನ್ಯಗಳಿಗೆ ಭೇಟಿ ನೀಡುವ ಸೋಮಣ್ಣ ರಾತ್ರಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಭಾನುವಾರ "ಮೈತ್ರಿ' ಅಭಿನಂದನೆ

ಸಚಿವರಾದ ಬಳಿಕ ಜಿಲ್ಲೆಗೆ ಆಗಮಿಸಲಿರುವ ವಿ.ಸೋಮಣ್ಣಗೆ ಅದ್ದೂರಿ ಸ್ವಾಗತ ಕೋರಲು ಬಿಜೆಪಿ-ಜೆಡಿಎಸ್​ "ಮೈತ್ರಿ' ಸಿದ್ಧತೆ ನಡೆಸಿದೆ. ಭಾನುವಾರ ಬೆಳಗ್ಗೆ 11ಕ್ಕೆ ತುಮಕೂರು ನಗರದ ಎಸ್​ಐಟಿ ಕಾಲೇಜು ಮುಂಭಾಗದಿಂದ ಸೋಮಣ್ಣರನ್ನು ಅದ್ದೂರಿ ಮೆರವಣಿಗೆ ಮೂಲಕ ಎಸ್​ಎಸ್​ ಸರ್ಕಲ್​, ಕೋತಿತೋಪು, ಅಮಾನಿಕೆರೆ ರಸ್ತೆ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಬಾವಿಕಟ್ಟೆ ಕಲ್ಯಾಣ ಮಂಟಪದವರೆಗೆ ಕರೆತರಲಾಗುವುದು. ಈ ವೇಳೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಅಭಿನಂದನಾ ಸಮಾರಂಭ: ನೂತನ ಜಲಶಕ್ತಿ, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣರನ್ನು ಬಿಜೆಪಿ-ಜೆಡಿಎಸ್​ ಮೈತ್ರಿ ನೇತೃತ್ವದಲ್ಲಿ ಅಭಿನಂದಿಸಲಾಗುವುದು. ಈ ಸಮಾರಂಭದಲ್ಲಿ ಉಭಯಪಕ್ಷಗಳ ಹಾಲಿ, ಮಾಜಿ ಶಾಸಕರು, ಮಾಜಿ ಸಂಸದರು ಭಾಗವಹಿಸಲಿದ್ದಾರೆ. ಈ ವೇಳೆ ಜಿಲ್ಲೆಯ ಯೋಜನೆಗಳ ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಸಿ.ಆಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್​.ನಾಗರಾಜು, ನಗರಾಧ್ಯಕ್ಷ ವಿಜಯಕುಮಾರ್​, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್​ಗೌಡ, ಉಪಾಧ್ಯಕ್ಷರಾದ ನಾಗರತ್ನಮ್ಮ, ಅನಿತಾ, ಕಾರ್ಯದರ್ಶಿಗಳಾದ ಕೆಂಪೇಗೌಡ, ಜ್ಯೋತಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net