8 ರಂದು ಪಾಲಿಕೆ ನೌಕರರ ಸಾಮೂಹಿಕ ರಜೆ

Palike_naukara
Published on

ತುಮಕೂರು: ಮಹಾನಗರ ಪಾಲಿಕೆಯ ನೌಕರರಿಗೂ 7ನೇ ವೇತನ ಆಯೋಗದ ಸೌಲಭ್ಯಗಳನ್ನು ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಪಾಲಿಕೆ ನೌಕರರು ಜುಲೈ 8 ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

ಪಾಲಿಕೆ ಅಧಿಕಾರಿ ನೌಕರರಿಗೆ ಯಥಾವತ್ತಾಗಿ ಪಾವತಿಸಲು ಸರ್ಕಾರ ಆರ್ಥಿಕ ಇಲಾಖೆಯಿಂದಲೇ ಅನುದಾನವನ್ನು ಬಿಡುಗಡೆ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಬೇಕು, ಕೆಜಿಐಡಿ ಹಾಗೂ ಜಿಪಿಎ್​ ಸೌಲಭ್ಯ, ಆರೋಗ್ಯ ಸಂಜೀವಿನಿಯನ್ನು ಜಾರಿಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಜು.8 ರಿಂದ ಬೆಂಗಳೂರಿನ ಸ್ವಾತಂತ್ರ$್ಯ ಉದ್ಯಾನವನದಲ್ಲಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ರಾಜ್ಯ ಮಹಾನಗರಪಾಲಿಕೆ ನೌಕರರ ಸಂಘಗಳ ಪರಿಷತ್​ ಅಧ್ಯಕ್ಷ ಎ.ಅಮೃತರಾಜ್​ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ ಜು.8 ರಂದು ಮಹಾನಗರಪಾಲಿಕೆಗಳ ನೌಕರರು ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ ಸಾಮೂಹಿಕ ರಜೆ ಹಾಕಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರತಿ ಮೂರು ವರ್ಷಕ್ಕೊಮ್ಮೆ ವೃಂದ ಮತ್ತು ನೇಮಕಾತಿ ನಿಮಯಗಳ ತಿದ್ದುಪಡಿ ಮಾಡಬೇಕಾಗಿದ್ದು 15 ವರ್ಷ ಕಳೆದರು ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ.ಇದರಿಂದ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮುಂಬಡ್ತಿ, ನೇರ ನೇಮಕಾತಿಗಳಲ್ಲಿ ಸಾಕಷ್ಟು ಅನ್ಯಾಯವಾಗಿದೆ.ಬಹುತೇಕ ಹುದ್ದೆಗಳಿಗೆ ಎರವಲು ಸೇವೆಯನ್ನೇ ಬಳಸಿಕೊಳ್ಳುವುದರಿಂದ ಹತ್ತಾರು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕೆಲಸ ಮಾಡುವುದಲ್ಲದೆ, ವೇತನದಲ್ಲಿ ಸಾಕಷ್ಟು ವ್ಯತ್ಯಾಸಕಂಡು ಬಂದಿದೆ. ಇದರ ಬಗ್ಗೆ ಹಲವಾರು ಬಾರಿ ಸರ್ಕಾರಕ್ಕೆ, ಸಂಬಂಧಪಟ್ಟ ಮಂತ್ರಿಗಳಿಗೆ, ಎಲ್ಲಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕಪು$್ಪಪಟ್ಟಿ ಧರಿಸಿ ಕಾರ್ಯನಿರ್ವಹಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರು ಪ್ರಯೋಜನವಾಗಿಲ್ಲ. ಹಾಗಾಗಿ ಹೋರಾಟವೊಂದೇ ನಮ್ಮ ಮುಂದಿರುವ ದಾರಿಯಾಗಿದೆ ಎಂದರು.

ಅದೇರೀತಿ ಸರ್ಕಾರಿ ನೌಕರರಿಗೆ ಇರುವಂತೆ ಕೆಜಿಐಡಿ, ಜಿಪಿಎಫ್​ ಸೌಲಭ್ಯವನ್ನು ಪಾಲಿಕೆ ನೌಕರರಿಗೆ ಜಾರಿಗೊಳಿಸಬೇಕು. ಪ್ರತಿವರ್ಷ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪಾಲಿಕೆ ನೌಕರರಿಗೂ ಆಯೋಜಿಸಬೇಕು. ಹಲವಾರು ವರ್ಷಗಳಿಂದ ಮುಂಬಡ್ತಿಗೆ ವಂಚಿತರಾಗಿರುವ ನೌಕರರಿಗೆ ಮುಂಬಡ್ತಿ ನೀಡುವಂತೆ ಆಗ್ರಹಿಸಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 10 ಪಾಲಿಕೆಗಳ ನೌಕರರು ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುವ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು. ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲು ಸಾಧ್ಯವಾಗದ ನೌಕರರು ತಾವು ಕಾರ್ಯನಿರ್ವಹಿಸುವ ಪಾಲಿಕೆಯ ಆಯುಕ್ತರ ಕಚೇರಿ ಮುಂಭಾಗದಲ್ಲಿಯೇ ತಮ್ಮ ಬೇಡಿಕೆಗಳ ಫಲಕಗಳೊಂದಿಗೆ ಪ್ರತಿಭಟನೆ ನಡೆಸುವಂತೆ ಅಮೃತರಾಜ್​ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತಿನ ಉಪಾಧ್ಯಕ್ಷ ಜಿ.ವೆಂಕಟರಾಮ್​, ಪ್ರಧಾನ ಕಾರ್ಯದರ್ಶಿ ಟಿ.ಇ.ಬಸವರಾಜಯ್ಯ, ಬಿ.ರುದ್ರೇಶ್​, ಪ್ರಹ್ಲಾದ್​ ಕುಲಕರ್ಣಿ, ಸಾಯಿಶಂಕರ್​, ಎ.ಜಿ.ಬಾಬು, ಎಚ್​. ಪ್ರಸನ್ನಕುಮಾರ್​, ಎಸ್​.ಜಗದೀಶ್​, ಶ್ರೀನಿವಾಸ್​, ಪುಷ್ಪಲತಾ, ಎನ್​.ಬಿ.ಮಧು, ಮಹೇಶ್​ಬಾಬು ಮತ್ತಿತರರ ಪದಾಧಿಕಾರಿಗಳು ಹಾಜರಿದ್ದರು.

ಆರೋಗ್ಯ ಸಂಜೀವಿನಿ ಜಾರಿಗೆ ತನ್ನಿ

ರಾಜ್ಯ ಸರ್ಕಾರ ತನ್ನ ನೌಕರರಿಗೆ ಜಾರಿಗೆ ತಂದಿರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಮಹಾನಗರ ಪಾಲಿಕೆ ನೌಕರರಿಗೂ ವಿಸ್ತರಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಜನರೊಂದಿಗೆ ಬೇರೆತು ಕೆಲಸ ಮಾಡುವ ಪಾಲಿಕೆಯ ಆರೋಗ್ಯ ಅಧಿಕಾರಿಗಳು, ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಪೌರಕಾರ್ಮಿಕರುಗಳಿಗೆ ಆರೋಗ್ಯ ಸಂಜೀವಿನಿ ಯೋಜನೆ ಅತ್ಯಗತ್ಯವಾಗಿದೆ. ಪ್ರಸ್ತುತವಿರುವ ಮರು ಪಾವತಿ ಯೋಜನೆಯಲ್ಲಿ ಒಮ್ಮೆ ಖರ್ಚು ಮಾಡಿದರೆ ಶೇ.35 ರಷ್ಟು ಮಾತ್ರ ವಾಪಸ್​ ಬರುತ್ತದೆ. ಸಣ್ಣಪುಟ್ಟ ಹುದ್ದೆಯಲ್ಲಿ ಕೆಲಸ ಮಾಡುವ ನೌಕರರಿಗೆ ಇದರಿಂದ ಬಹಳ ತೊಂದರೆಯಾಗಲಿದೆ.ಹಾಗಾಗಿ, ನಮಗೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ತುರ್ತಾಗಿ ವಿಸ್ತರಿಸುವಂತೆ ಎ.ಅಮೃತ್​ರಾಜ್​ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net