

ಕೆ.ಆರ್.ನಗರ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ನಡೆದ ನಂತರ ಸಭಾಂಗಣದಿಂದ ಹೊರ ಬಂದ ನ್ಯಾಯಾಧೀಶರು ತಾಲೂಕು ಪಂಚಾಯಿತಿ ಕಟ್ಟಡದ ಶಿಥಿಲಾವಸ್ಥೆಯನ್ನು ಕಂಡು ತಾಲೂಕು ಪಂಚಾಯಿತಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ.ಅರವಿಂದ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ತಾಲೂಕು ಪಂಚಾಯಿತಿ ಕಟ್ಟಡ ಶಿಥಿಲಾವಸ್ಥೆ ತಲುಪಿ ಕುಸಿಯುವ ಹಂತ ತಲುಪಿರುವುದನ್ನು ಕಂಡು ನೌಕರರು ಹೇಗೆ ಕಾರ್ಯನಿರ್ವಹಿಸುವುದು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕಚೇರಿಯಲ್ಲಿ ಇರುವ ಕಾರ್ಯನಿರ್ವಹಣಾಧಿಕಾರಿ, ಆಡಳಿತಾಧಿಕಾರಿ ಮತ್ತು ಗ್ಯಾರಂಟಿ ಸಮಿತಿ ಅಧ್ಯಕ್ಷರ ಕೊಠಡಿಗಳು ಸ್ವಚ್ಛವಾಗಿವೆ ಆದರೆ ಕಚೇರಿಯ ಆವರಣ ಮತ್ತು ಶೌಚಗೃಹ ಗಬ್ಬೆದ್ದು ನಾರುತ್ತಿದ್ದು, ಇದನ್ನು ಹೇಳುವವರು ಹಾಗೂ ಕೇಳುವವರು ಯಾರು ಇಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾ.ಪಂ.ಆವರಣದಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲದಿರುವುದು ಮತ್ತು ಕಚೆೇರಿ ಸಂಪರ್ಕ ರಸ್ತೆ ಹಾಳಾಗಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಅಧಿಕಾರಿಗಳು ಕಟ್ಟಡದ ಅವ್ಯವಸ್ಥೆಯ ಬಗ್ಗೆ ಶಾಸಕರ ಗಮನಕ್ಕೆ ತಂದು ಇದನ್ನು ದುರಸ್ತಿ ಪಡಿಸಲು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಕಾರ್ಯ ನಿರ್ವಹಣಾಧಿಕಾರಿ ಬಗ್ಗೆ ಅಸಮಾಧಾನ: ತಾ.ಪಂ.ಆಡಳಿತ ಸಭಾಂಗಣದಲ್ಲಿ ಕಾರ್ಮಿಕರ ದಿನಾಚರಣೆ ನಡೆಯುತ್ತಿದ್ದು, ಇಲ್ಲಿಗೆ ನ್ಯಾಯಾಧೀಶರು ಆಗಮಿಸಿದ್ದರು. ಕಾರ್ಯ ನಿರ್ವಹಣಾಧಿಕಾರಿ ವಿ.ಪಿ.ಕುಲದೀಪ್ ಬಾರದಿದ್ದರಿಂದ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ಇಂತಹ ವರ್ತನೆಯನ್ನು ಅಧಿಕಾರಿಗಳು ತಿದ್ದಿಕೊಳ್ಳಬೇಕು ಎಂದು ಎಚ್ಚರಿಸಿದರು.