ಸುಭಾಶರ ಕಥೆ ಉಳಿಸಿದ್ದು ಪತ್ರಕರ್ತರು; ಡಾ.ಜಿ.ಬಿ.ಹರೀಶ ಅಭಿಮತ,ಮಹಾಕಾಲ ಭಾಗ-2 ಬಿಡುಗಡೆ

GBH
Published on

ಬೆಂಗಳೂರು : ನೇತಾಜಿ ಸುಭಾಶ್ಚಂದ್ರ ಬೋಸರ ಇತಿಹಾಸ ಮತ್ತು ಬದುಕಿನ ಕಥನವನ್ನು ಜೀವಂತವಾಗಿ ಉಳಿಸಿದವರು ಇತಿಹಾಸಕಾರರಲ್ಲ; ಬದಲಾಗಿ ಪತ್ರಕರ್ತರು ಎಂದು ಕಾದಂಬರಿಕಾರ ಜಿ.ಬಿ.ಹರೀಶ ಹೇಳಿದ್ದಾರೆ.

ಶನಿವಾರ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಆಯೋಜಿಸಿದ್ದ ವಿಕ್ರಮ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದ, ಅಯೋಧ್ಯಾ ಬುಕ್ಸ್ ಪ್ರಕಟಿಸಿದ ಮಹಾಕಾಲ ಭಾಗ 2 ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯ ಇತಿಹಾಸದಲ್ಲಿ ಸುಭಾಶ್ಚಂದ್ರ ಬೋಸರು ಅಶ್ವತ್ಥಾಮನಂತೆ ಎಂದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಹೇಳಿದ್ದರು. ಅವರ ಸತ್ಯಕಥೆಯನ್ನು ಕಾದಂಬರಿಯ ಹೂರಣವಾಗಿಸಿ ಕೃತಿಯನ್ನು ರಚಿಸಲಾಗಿದೆ. ಚರಿತ್ರೆಯ ಜಾನಪದೀಕರಣದ ಪ್ರಯತ್ನವೇ ಮಹಾಕಾಲ ಕೃತಿ. ಈ ಕೃತಿಯಲ್ಲಿ ರಾಜಕೀಯ ಇತಿಹಾಸದ ಜೊತೆಗೆ ಸಾಮಾಜಿಕ ಇತಿಹಾಸವನ್ನೂ ತಿಳಿಸಿಕೊಡಲಾಗಿದೆ. ಪಾತ್ರಗಳ ಮೂಲಕ ತತ್ವವನ್ನೂ ಕಾದಂಬರಿಯಲ್ಲಿ ಪರಿಚಯಿಸಲಾಗಿದೆ ಎಂದು ಕೃತಿಯನ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರ್‌ಎಸ್‌ಎಸ್ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಮಾತನಾಡಿ ವ್ಯಾಖ್ಯಾನ ಅಥವಾ ವಿಶ್ಲೇಷಣೆ ಭಾರತೀಯ ಸಮಾಜದ ಲಕ್ಷಣ. ನಮ್ಮ ಸಾಹಿತ್ಯಗಳೆಲ್ಲವೂ ಈ ಹಿನ್ನೆಲೆಯಲ್ಲಿಯೇ ಮೂಡಿಬಂದಿದೆ. ಮಹಾಕಾಲ ಕೃತಿಯಲ್ಲಿ ಜಾಗತಿಕ ವಿದ್ಯಮಾನಗಳನ್ನು ಸುಭಾಷರು ಕಂಡ ಬಗೆ ಸೊಗಸಾಗಿ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಿಬಂತಿ ಪದ್ಮನಾಭ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net