ಪತ್ರಕರ್ತನ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ : ಬೇಕೂರು ಶಾಲೆಯಲ್ಲಿ ರ‌್ಯಾಗಿಂಗ್ ದೃಶ್ಯಾವಳಿ ಸೆರೆ ಹಿಡಿದ ಹಿನ್ನೆಲೆ

raging
Published on

ಉಪ್ಪಳ: ಮಂಗಲ್ಪಾಡಿ ಸಮೀಪದ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಬಳಿ ವಿದ್ಯಾರ್ಥಿಗಳ ಗುಂಪು ಜೂನಿಯರ್ ವಿದ್ಯಾರ್ಥಿಗಳಿಗೆ ರ‌್ಯಾಗಿಂಗ್ ಮಾಡುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತನ ಮೇಲೆ ವಿದ್ಯಾರ್ಥಿಗಳ ಗುಂಪು ಮತ್ತು ಕೆಲವು ಪುಂಡರು ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ದೃಶ್ಯ ಮಾಧ್ಯಮ ವರದಿಗಾರ ಧನರಾಜ್ ಐಲ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲಸದ ನಿಮಿತ್ತ ಆ ಮಾರ್ಗವಾಗಿ ತೆರಳುತ್ತಿದ್ದಾಗ ಬೇಕೂರಲ್ಲಿ ರಸ್ತೆಬದಿ ಮಕ್ಕಳ ನಡುವೆ ಜಗಳ ನಡೆಯುವುದನ್ನು ಕಂಡು ಮುಖ್ಯಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಶಿಕ್ಷಕರು ಮತ್ತು ಇತರರು ಸ್ಥಳಕ್ಕೆ ಆಗಮಿಸಿ ದೃಶ್ಯವನ್ನು ಚಿತ್ರೀಕರಿಸಿ ವಿದ್ಯಾರ್ಥಿಗಳನ್ನು ತೆರಳುವಂತೆ ಸೂಚಿಸಿದರು. ಆದರೂ ಬಿಡದ ವಿದ್ಯಾರ್ಥಿಗಳು ಆ ಮಾರ್ಗವಾಗಿ ಬಸ್ ಹತ್ತಿ ಪರಾರಿಯಾಗಲು ಯತ್ನಿಸಿದ ಕೆಲ ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಬಸ್‌ನಲ್ಲಿಯೇ ಥಳಿಸಿದ್ದಾರೆ. ಇದನ್ನೂ ಧನರಾಜ್ ಸೆರೆಹಿಡಿದಿದ್ದು ಬಳಿಕ ಧನರಾಜ್ ಬಸ್‌ನಿಂದ ಇಳಿದು ಶಾಲಾ ಶಿಕ್ಷಕರೊಂದಿಗೆ ಮಾತನಾಡಲು ಮತ್ತು ಶಾಲೆಯ ಗೇಟ್‌ನ ದೃಶ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿರುವಾಗ ಕೆಲವು ಗೂಂಡಾಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧನರಾಜ್‌ನನ್ನು ಸುತ್ತುವರಿದು ಪ್ರೆಸ್ ಐಡಿ ಕಾರ್ಡ್ ಮತ್ತು ಮೊಬೈಲ್ ಫೋನ್ ಕಿತ್ತೆಸೆದು, ಮೊಬೈಲ್‌ನಲ್ಲಿ ಸೆರೆಹಿಡಿದ ವಿಡಿಯೋಗಳನ್ನು ಡಿಲೀಟ್ ಮಾಡಿದ ನಂತರ ವಾಪಸ್ ನೀಡಿ ಈ ಪ್ರದೇಶಕ್ಕೆ ಬರದಂತೆ, ಮಾಧ್ಯಮಗಳಿಗೆ ಸುದ್ದಿ ನೀಡದಂತೆ ಬೆದರಿಕೆ ಹಾಕಿದ್ದಾರೆ.

ಕೇರಳ ಜರ್ನಲಿಸ್ಟ್ ಯೂನಿಯನ್ ಪತ್ರಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿ ಸಮಗ್ರ ತನಿಖೆಗೆ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net