

ಹುಣಸೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಆರೋಗ್ಯಪೂರ್ಣ ಭಾರತ ನಿರ್ಮಾಣ ನಮ್ಮೆಲ್ಲರ ಸಾಮಾಜಿಕ ಹೊಣೆಯಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ಹೊಂಗಯ್ಯ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ತಾ.ಪಂ. ಮತ್ತು ಐಟಿಸಿ-ಔಟ್‌ರೀಚ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಏಕ್‌ದಿನ್, ಏಕ್ ಘಂಟಾ, ಏಕ್ ಸಾಥ್ ಕಾರ್ಯಕ್ರಮದಡಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಡುವುದು ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಮಹಾತ್ಮಾ ಗಾಂಧೀಜಿ ಕಂಡ ಕನಸಿನ ಭಾರತ ಆರೋಗ್ಯಪೂರ್ಣ ಮತ್ತು ಸದೃಢ ಭಾರತ ನಿರ್ಮಾಣವಾಗಬೇಕು. ಊರಿನ ಸ್ವಚ್ಛತೆ ಎನ್ನುವುದು ಕೇವಲ ಕೆಲಸ ಎನ್ನುವ ಭಾವನೆ ಇರಬಾರದು. ಬದಲಾಗಿ ಅದು ನಮ್ಮೆಲ್ಲರ ಹೊಣೆಗಾರಿಕೆ ಎನ್ನುವುದನ್ನು ಮನಗಾಣಬೇಕು. ತಾಲೂಕಿನ ಎಲ್ಲ ಗ್ರಾ.ಪಂ.ಕೇಂದ್ರಗಳಲ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಅ.2ರ ಗಾಂಧಿ ಜಯಂತಿಯಂದು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುವುದು ಎಂದರು.
ಐಟಿಸಿ-ಔಟ್‌ರೀಚ್ ಸಂಸ್ಥೆ ತರಬೇತುದಾರ ಎಸ್.ಜಗದೀಶ್ ಮಾತನಾಡಿ, ಲೈಟ್‌ಹೌಸ್ ಫೇಸ್-2ರಡಿ ತಾಲೂಕಿನ ಎಲ್ಲ 40 ಗ್ರಾ.ಪಂ.ಗಳಲ್ಲೂ ಸಾಮೂಹಿಕ ಶ್ರಮದಾನ, ಸರ್ಕಾರಿ ಕಟ್ಟಡಗಳು, ಧಾರ್ಮಿಕ ಸ್ಥಳಗಳ ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮವನ್ನಾಗಿಸುವ, ಜಲಮೂಲಗಳನ್ನು ಸ್ವಚ್ಛವಾಗಿರಿಸುವ ಕಾರ್ಯ ನಡೆಸಲಾಗುವುದು ಎಂದರು.
ತಾ.ಪಂ.ತಾಲೂಕು ಯೋಜನಾಧಿಕಾರಿ ರಾಜೇಶ್, ಸಹಾಯಕ ಲೆಕ್ಕಾಧಿಕಾರಿ ಹರೀಣಿ, ಮ್ಯಾನೇಜರ್ ಮಹೇಶನಾಯಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ರಾಜೇಂದ್ರ, ಲೋಕೇಶ, ನಟೇಶ, ಔಟ್ ರೀಚ್ ಸಂಸ್ಥೆಯ ಕೇಂಡೇಶ್, ಸೂರ್ಯ, ಎನ್.ಆರ್.ಎಲ್.ಎಂ., ತಾ. ಪಂ.ಸಿಬ್ಬಂದಿ, ಪೌರಕಾರ್ಮಿಕರು ಹಾಜರಿದ್ದರು.