ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ

27_Hanagodu_1
Published on

ಹನಗೋಡು: ಸಮೀಪದ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಂಬಾಕು ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷೆ ಗೀತಾ ಸುರೇಶ್, ಮಕ್ಕಳು ಇಂತಹ ಜಾಗೃತಿ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಂಡು ವೈಯಕ್ತಿಕ ಆರೋಗ್ಯ ಉತ್ತಮ ಪಡಿಸಿಕೊಂಡು ಶಾಲಾ ಪರಿಸರ ಹಾಗೂ ಮನೆಯ ಪರಿಸರವನ್ನು ಆರೋಗ್ಯಕರವಾಗಿ ಇಟ್ಟುಕೊಂಡು ಉತ್ತಮ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಸೋಮಶೇಖರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದರ ಜತೆಗೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಯಾವ ದುಶ್ಚಟಗಳಿಗೂ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಯೋಜನಾಧಿಕಾರಿ ನಾರಾಯಣಶೆಟ್ಟಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ವಿದ್ಯಾರ್ಥಿ ವೇತನ, ಶಿಕ್ಷಕರ ನೇಮಕ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡುತ್ತಿದೆ. ಇದಲ್ಲದೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ನೇರಳಕುಪ್ಪೆ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಜವರಮ್ಮ, ಮೇಲ್ವಿಚಾರಕಿ ಪುಷ್ಪಲತಾ, ಶಾಲೆಯ ಶಿಕ್ಷಕರಾದ ಪ್ರೀತಿ, ಸುಂದರೇಶ್, ಪುನೀತ್ ಕುಮಾರ್, ಶಾರದಾ, ರೇಷ್ಮಾ, ಸುಶ್ಮಿತಾ, ಸೇವಾಪ್ರತಿನಿಧಿ ಮಮತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net