

ಸಕಲೇಶಪುರ: ಯುವ ಜನಾಂಗಕ್ಕೆ ಮಾದಕ ವಸ್ತುಗಳು ಸಿಗದಂತೆ ಮಾದಕವಸ್ತುಮುಕ್ತ ಸಮಾಜ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಸಲಹೆ ನೀಡಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಅಮಲುಮುಕ್ತ ಸಕಲೇಶಪುರಕ್ಕಾಗಿ ಆಯೋಜಿಸಲಾಗಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ವಿದ್ಯಾರ್ಥಿಗಳಿಗೆ ನಶೆ ಬರುವ ಪದಾರ್ಥಗಳು ಬಹುಬೇಗನೆ ಕೈಗೆ ಸಿಗುವಂತಾಗುತ್ತಿದೆ. ವಿದ್ಯಾರ್ಥಿಗಳು ಈ ತರಹದ ಚಟಗಳಿಗೆ ಬಿದ್ದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಂಡು ಮನೆಯಲ್ಲಿ ಹಣಕ್ಕಾಗಿ ತಂದೆ, ತಾಯಿಗಳನ್ನು ಹಿಂಸಿಸಿ, ಮನೆಯ ಪದಾರ್ಥಗಳನ್ನು ಎಲ್ಲೆಂದರಲ್ಲಿ ಮಾರಿ ಹಣ ಪಡೆದುಕೊಂಡು ನಶೆಯ ಚಟಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಡ್ರಗ್ಸ್ ಜಾಲಕ್ಕೆ ಶ್ರೀಮಂತರ ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದು ಹಣದ ದುರಾಸೆಗಾಗಿ ಯುವತಿಯರನ್ನೂ ಡ್ರಗ್ಸ್ ಜಾಲದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ವ್ಯಸನಿಗಳನ್ನು ಮನುಷ್ಯರನ್ನಾಗಿ ಮಾಡುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸೋಣ. ಈ ನಿಟ್ಟಿನಲ್ಲಿ ಆಗಸ್ಟ್ 21ರ ಬುಧವಾರ ಬೆಳಗ್ಗೆ 11.30ಕ್ಕೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಅಮಲು ಮುಕ್ತ ಸಕಲೇಶಪುರ ಕಾರ್ಯಕ್ರಮಕ್ಕಾಗಿ ನಡೆಯುವ ಸಭೆಗೆೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈಭೀಮ್ ಮಂಜು, ಪತ್ರಕರ್ತರಾದ ಮಲ್ನಾಡ್ ಮೆಹಬೂಬ್, ಯೋಗೇಶ್, ಪ್ರವೀಣ್ ನಾಯ್ಡು , ಮಲ್ನಾಡ್ ಜಾಕೀರ್ ಮತ್ತಿತರರು ಹಾಜರಿದ್ದರು.