ಸಮಾಜ ಸುಧಾರಣೆಗೆ ಕೈಜೋಡಿಸಿ

25KMD-1
Published on

ಕೆ.ಎಂ.ದೊಡ್ಡಿ: ಪದವಿ ಗಳಿಕೆ ವಿದ್ಯಾರ್ಥಿಯ ಮೈಲಿಗಲ್ಲಾಗಿದ್ದು ಇನ್ನು ಎಷ್ಟು ದೂರ ಕ್ರಮಿಸಬೇಕು ಎಂಬ ದಿಕ್ಸೂಚಿಯೂ ಹೌದು ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಲಿಂಗರಾಜ್ ಗಾಂಧಿ ತಿಳಿಸಿದರು.

ಭಾರತೀ ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದಿಂದ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನ ಯಾತ್ರೆಯಲ್ಲಿ ಪ್ರಮುಖ ಪದವಿ, ಸ್ನಾತಕೋತ್ತರ, ಪಿಎಚ್.ಡಿ ಪಡೆದು ಮುಂದಿನ ಘಟ್ಟ ಉದ್ಯೋಗ ಸ್ವಯಂ ಉದ್ಯೋಗ ಪಡೆಯುವ ಮಹದಾಸೆಯಾಗಿದೆ ಎಂದು ಕಿವಿಮಾತು ಹೇಳಿದರು.

ಭಾರತೀ ಕಾಲೇಜು ಸ್ವಾಯತ್ತ ಪಡೆದು ಮೊದಲ ಬಾರಿಗೆ ಪದವಿ ಪ್ರಶಸ್ತಿ ಸಮಾರಂಭವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದು, ವಿದ್ಯಾರ್ಥಿಗಳು ನಿಮ್ಮ ಕನಸು ಈಡೇರಿಸುವ ಜತೆಗೆ ನಿಮ್ಮ ಬೆಂಬಲಿಸಿದ್ದ ಶಿಕ್ಷಣ ಸಂಸ್ಥೆ, ಕುಟುಂಬ, ಸ್ನೇಹಿತರು, ನೆರೆಹೊರೆ ಸಮಾಜವನ್ನು ಮುನ್ನಡೆಸುವ ದಾರಿಯಲ್ಲಿ ಸಮಾಜ ಸುಧಾರಣೆಗೆ ಕೈಜೋಡಿಸಿ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬಡವರಿಗೆ, ರೈತರ ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಮತ್ತು ಶುಲ್ಕವಿಲ್ಲದ ಶಿಕ್ಷಣ ನೀಡುವ ಕೆಲಸವನ್ನು ಸರ್ಕಾರ ಮಾಡದಿರುವ ಕಾರ್ಯವನ್ನು ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಮಾಡಿ ತೋರಿಸಿದ್ದಾರೆ ಎಂದು ಶ್ಲಾಘಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಕೆ.ಲೋಕನಾಥ್ ಮಾತನಾಡಿ, ಪದವಿ ಪಡೆದವರಿಗೆಲ್ಲ ಉದ್ಯೋಗ ದೊರೆಯುವುದಿಲ್ಲ. ನಿಮ್ಮಲ್ಲಿ ಕೌಶಲಧಾರಿತ ಶಿಕ್ಷಣ ಇರಬೇಕು. ಆಗ ಉದ್ಯೋಗ ದೊರೆಯುತ್ತದೆ. ಜಪಾನ್‌ನಲ್ಲಿ 100 ವಿದ್ಯಾರ್ಥಿಗಳಿಗೆ 92 ಜನರಿಗೆ ಉದ್ಯೋಗ ದೊರೆಯುತ್ತದೆ. ಆದರೆ, ಭಾರತದಲ್ಲಿ 100ರಲ್ಲಿ 12 ಜನರಿಗೆ ಉದ್ಯೋಗ ದೊರೆಯುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಮತ್ತು ಬಿಇಟಿ ಮುಖ್ಯಸ್ಥ ಮಧು ಜಿ.ಮಾದೇಗೌಡ ಮಾತನಾಡಿ, ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಉತ್ತಮ ಸೇವೆ ನೀಡುವ ಮೂಲಕ ಹೆತ್ತವರಿಗೂ ನಿಮಗೆ ವಿದ್ಯೆ ನೀಡಿದ ಕಾಲೇಜಿಗೂ ಉತ್ತಮ ಹೆಸರು ತರಬೇಕು ಎಂದರು.

ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ಹಣದ ಹಿಂದೆ ಹೋಗಬಾರದು. ಪ್ರಾಮಾಣಿಕ ಪರಿಶ್ರಮವಿದ್ದರೆ ಹಣ ಮತ್ತು ಅವಕಾಶಗಳು ನಿಮ್ಮನ್ನು ಹಿಂಬಾಲಿಸುತ್ತವೆ. ನೀವು ಯಾವಾಗಲೂ ಸೇವಾ ಮನೋಭಾವ ರೂಪಿಸಿಕೊಳ್ಳಿ. ನಮ್ಮ ಸಂಸ್ಥೆ ಪದವಿ ನೀಡುವುದರ ಜತೆಗೆ ಸಂಸ್ಕಾರ ಕಲಿಸಿದೆ. ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಸಾಧನೆ ಕಡೆಗೆ ನಿಮ್ಮ ನಡೆ ಇರಲಿ ಎಂದು ಹೇಳಿದರು.

ಬಿಇಟಿ ಟ್ರಸ್ಟಿ ಮುದ್ದಯ್ಯ, ಭಾರತೀ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ನಾಗೇಂದ್ರ, ಭಾರತೀ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಪ್ರೊ.ಎಸ್.ನಾಗರಾಜು, ಪರೀಕ್ಷಾ ನಿಯಂತ್ರಕ ಜಯರಾಮೇಗೌಡ, ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್‌ಲೆನ್ಸ್ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net