ಜ್ಞಾನದ ಭಂಡಾರ ಜೋಗಿಮನೆ ಶಾಲೆ

30bkl2
Published on

ಭಟ್ಕಳ: ಹಳೆಯ ವಿದ್ಯಾರ್ಥಿಗಳ ಸಹಕಾರ, ಶಿಕ್ಷಕರ ಇಚ್ಛಾಶಕ್ತಿ, ಎಸ್​ಡಿಎಂಸಿ ಅಧ್ಯಕ್ಷರ ಮುತುವರ್ಜಿಯಿಂದಾಗಿ ತಾಲೂಕಿನ ಮುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಜೋಗಿಮನೆ ಕಿರಿಯ ಪ್ರಾಥಮಿಕ ಶಾಲೆ ಎಲ್ಲರ ಗಮನ ಸೆಳೆಯುತ್ತಿದೆ.

2003ರಲ್ಲಿ ಒಂದು ಕೊಠಡಿಯಿಂದ ಆರಂಭವಾದ ಶಾಲೆಗೆ ಹೆಚ್ಚುವರಿಯಾಗಿ ಮತ್ತೊಂದು ಕೊಠಡಿ ನಿರ್ವಿುಸಲಾಗಿದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸಲು ಮತ್ತು ಕಲಿಕೆಗೆ ಪೂರಕ ವ್ಯವಸ್ಥೆಯನ್ನು ಶಾಲೆ ಒಳಗೊಂಡಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 19 ವಿದ್ಯಾರ್ಥಿಗಳಿದ್ದಾರೆ.

ಕೋವಿಡ್ ಕಾಲದಲ್ಲಿ ಅರಳಿದ ಶಾಲೆ: ಕರೊನಾ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರುವ ವೇಳೆ ಮುಖ್ಯೋಪಾಧ್ಯಾಯ ಅರುಣ ಮೇಸ್ತ ಹಾಗೂ ಎಸ್​ಡಿಎಂಸಿ ಅಧ್ಯಕ್ಷ ಗಣೇಶ ಗುಡಿಗಾರ ಅವರು ನಡೆಸಿದ ಚಿಂತನೆ ಫಲಕೊಟ್ಟಿದೆ. ಪರಿಣಾಮವಾಗಿ ಶಾಲೆ ಗೋಡೆಗಳ ಮೇಲೆ ಜ್ಞಾನದ ಭಂಡಾರವೇ ಮೂಡಿದೆ. ಮಕ್ಕಳ ಕಲಿಕೆಗೆ ಬೇಕಾದ ಉಪಯುಕ್ತ ಮಾಹಿತಿಯನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದೆ.

ಒಂದು ಕಾಲದಲ್ಲಿ ರಸ್ತೆ ಸಂಪರ್ಕವಿಲ್ಲದ ಶಾಲೆಗೆ ಊರವರ ಕಾಳಜಿಯಿಂದ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಗುಡಿಗಾರ ಅವರು ಸ್ವತಃ ಕಲಾವಿದರಾಗಿದ್ದು, ಶಾಲೆಗೆ ಹೊಂದುವ ಬಣ್ಣ ಹಾಗೂ ಕಲಾಕೃತಿಗಳನ್ನು ಬಿಡಿಸಲು ಪ್ರೇರೇಪಿಸಿದ್ದಾರೆ. ಶಾಲೆಯ ಸ್ವಚ್ಛತೆಯಿಂದ ಹಿಡಿದು ಬಣ್ಣ ಬಳಿಯುವ ತನಕ ಅಂದಾಜು 25 ಸಾವಿರ ರೂಪಾಯಿ ವೆಚ್ಚವಾಗಿದ್ದು, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಊರವರು ಸಹಕರಿಸಿದ್ದಾರೆ.

ಎಸ್​ಡಿಎಂಸಿ ಅಧ್ಯಕ್ಷ, ಸದಸ್ಯರು, ಪಾಲಕರು, ಹಳೆಯ ವಿದ್ಯಾರ್ಥಿಗಳು, ನಾಗರಿಕರ ಸಹಕಾರದಿಂದ ಮಾದರಿ ಶಾಲೆಯಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದೆ. ದಾನಿಗಳ ನೆರವಿನಿಂದ ಇದೆಲ್ಲ ಸಾಧ್ಯವಾಗಿದೆ. | ಅರುಣ ಮೇಸ್ತ, ಮುಖ್ಯೋಪಾಧ್ಯಾಯ, ಜೋಗಿಮನೆ ಕಿರಿಯ ಪ್ರಾಥಮಿಕ ಶಾಲೆ

ನಮ್ಮ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಬೇಕು ಎನ್ನುವ ಹಠವಿತ್ತು. ವಿದ್ಯಾರ್ಥಿಗಳ ಸಂಖ್ಯೆಯೂ ಉತ್ತಮವಿತ್ತು. ಮುಂದಿನ ದಿನಗಳಲ್ಲಿ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎನ್ನುವ ಸಂಕಲ್ಪವಿದೆ.| ಮಂಜುನಾಥ ದೇವಾಡಿಗ, ಎಸ್​ಡಿಎಂಸಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net