

ಬೆಳವಣಿಕಿ(ರೋಣ): ಸಮೀಪದ ಯಾವಗಲ್ಲ ಗ್ರಾಮದಲ್ಲಿ ವೀರಭದ್ರೇಶ್ವರ ಹಾಗೂ ಬಸವಣ್ಣ ದೇವರ ಜೋಡು ರಥೋತ್ಸವವು ಸೆ. 13ರಂದು ಸಂಜೆ 5 ಗಂಟೆಗೆ ನಡೆಯಲಿದೆ.
ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ವಿಶೇಷತೆ ಪಡೆದ ಈ ರಥೋತ್ಸವವು ಅಣ್ಣತಮ್ಮಂದಿರ ರಥೋತ್ಸವ ಎಂದೇ ಪ್ರಸಿದ್ಧಿ ಪಡೆದಿದೆ.
ಶತಮಾನಗಳಷ್ಟು ಹಳೆಯದಾದ ಈ ಎರಡು ದೇವಸ್ಥಾನಗಳು ಭಕ್ತರ ಇಷ್ಟಾರ್ಥ ಈಡೇರಿಸುವ ಆರಾಧ್ಯ ದೈವ ಎಂಬ ನಂಬಿಕೆ ಭಕ್ತರಲ್ಲಿದೆ.
ಶ್ರೀ ವೀರಭದ್ರೇಶ್ವರ ದೇವರ ತೇರು 37 ಅಡಿ ಎತ್ತರವಾಗಿದ್ದು, ಈ ಭಾಗದಲ್ಲಿಯೇ ಅತೀ ಎತ್ತರದ ತೇರು ಎನಿಸಿಕೊಂಡಿದೆ. ಬಸವಣ್ಣ ದೇವರ ತೇರು 29 ಅಡಿ ಎತ್ತರವಾಗಿದ್ದು, ಸುಮಾರು 25 ಲಕ್ಷ ರೂ.ಗಳ ಸಾಗುವಾನಿ ಹಾಗೂ ನಂದಿ ಮರದ ಕಟ್ಟಿಗೆಗಳಿಂದ ನಿರ್ವಿುಸಲಾಗಿದೆ.
ಆಧುನಿಕ ಸ್ಪರ್ಷ ನೀಡುವ ನಿಟ್ಟಿನಲ್ಲಿ 40 ಕ್ವಿಂಟಾಲ್ ಕಬ್ಬಿಣ ಬಳಸಲಾಗಿದೆ. ಈ ಗಡ್ಡಿ ತೇರುಗಳು ನಿರಂತರವಾಗಿ ಚಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪಂಚಮರಗಳಾದ ಶ್ರೀಗಂಧ, ಹೊನ್ನಿ, ಸಾಗವಾನಿ, ನಂದಿ, ಮತ್ತಿಕಟ್ಟಿಗೆ ಬಳಸಲಾಗಿದೆ.